ಹೊಸದಿಗಂತ ವರದಿ ಮಂಡ್ಯ :
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಅ. 28, 29ರಂದು ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗೆ ವಸ್ತ್ರ ಸಂಹಿತೆ ಜಾರಿಯಾಗಿದ್ದು, ಹಿಜಾಬ್ ಧರಿಸಿಕೊಂಡು ಹಾಜರಾಗುವ ಅಭ್ಯರ್ಥಿಗಳು ಒಂದು ಗಂಟೆ ಮುಂಚಿತವಾಗಿ ಪರೀಕ್ಷಾ ಕೊಠಡಿಗೆ ಬರುವಂತೆ ಅಪರ ಜಿಲ್ಲಾಧಿಕಾರಿ ಡಾ. ಎಚ್.ಎಸ್. ನಾಗರಾಜು ಸೂಚನೆ ನೀಡಿದ್ದಾರೆ.
ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆದ ಕೆ.ಇ.ಎ. ಪರೀಕ್ಷೆ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಮಾತನಾಡಿದ ಅವರು, ಪುರುಷರು ಮತ್ತು ಸ್ತ್ರೀಯರಿಗೆ ಪ್ರತ್ಯೇಕ ವಸ್ತ್ರ ಸಂಹಿತೆ ಜಾರಿಯಾಗಿದ್ದು, ಕೆಇಎ ನಿಯಮಾನುಸಾರ ಪರೀಕ್ಷಾ ಕೇಂದ್ರದಲ್ಲಿ ತಪಾಸಣೆ ನಡೆಸಿ ಕೊಠಡಿಗೆ ತೆರಳಲು ಅನುಮತಿಸಲಾಗುತ್ತದೆ ಎಂದು ಹೇಳಿದರು.
ಅ. 28 ರಂದು ಆಪ್ತ ಕಾರ್ಯದರ್ಶಿ, ಹಿರಿಯ ಸಹಾಯಕರು, ಪ್ರಥಮ ದರ್ಜೆ ಸಹಾಯಕರು, ಸೇಲ್ಸ್ ಮೇಲ್ವಿಚಾರಕರು ಸೇರಿದಂತೆ ಮುಂತಾದ ಸಮನಾದ ಹುದ್ದೆಗಳಿಗೆ ಯಾವುದೇ ಲೋಪವಾಗದಂತೆ ಪರೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅ. 29 ರಂದು ದ್ವಿತೀಯ ದರ್ಜೆ ಸಹಾಯಕರು/ಕಿರಿಯ ಸಹಾಯಕರು ಸೇರಿದಂತೆ ಸಮನಾದ ಹುದ್ದೆಗಳಿಗೆ ಪರೀಕ್ಷೆ ನಡೆಯಲಿದೆ ಎಂದರು.
ಮಂಡ್ಯ ಜಿಲ್ಲೆಯಲ್ಲಿ ಒಟ್ಟು 27 ಸೆಂಟರ್‌ಗಳಲ್ಲಿ ಪರೀಕ್ಷೆ ನಡೆಯಲಿದ್ದು ಅದರಲ್ಲಿ ಅ. 28ರಂದು 17 ಕೇಂದ್ರಗಳಲ್ಲಿ ಮಾತ್ರ ಪರೀಕ್ಷೆ ನಡೆಯಲಿದೆ. ಅ. 29ರಂದು 27 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ವಿವರಿಸಿದರು. ಅ. 28ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿರುವ ಪರೀಕ್ಷೆಗೆ 4,162 ಅಭ್ಯರ್ಥಿಗಳು ಮತ್ತು ಮಧ್ಯಾಹ್ನ 2.30ಕ್ಕೆ ನಡೆಯಲಿರುವ ಪರೀಕ್ಷೆಗೆ 4,199 ಅಭ್ಯರ್ಥಿಗಳು, ಅ. 29ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿರುವ ಪರೀಕ್ಷೆಗೆ 10,643 ಅಭ್ಯರ್ಥಿಗಳು ಮತ್ತು ಮಧ್ಯಾಹ್ನ 2.30ಕ್ಕೆ ನಡೆಯಲಿರುವ ಪರೀಕ್ಷೆಗೆ 10,697 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.
ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯ ಒಳಗೆ ಯಾವುದೇ ಆಧುನಿಕ ಎಲೆಕ್ಟ್ರಾನಿಕ್ ಉಪಕರಣಗಳು, ಮೊಬೈಲ್ ಫೋನ್, ಬ್ಲೂಟೂಥ್, ಕ್ಯಾಲ್ಕುಲೇಟರ್‌ಗಳನ್ನು ನಿಷೇಧಿಸಲಾಗಿದೆ. ಪರೀಕ್ಷಾ ಕೆಲಸಕ್ಕೆ ನಿಯೋಜಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮೊಬೈಲ್‌ಉಪಯೋಗಿಸದಂತೆ ತಾಕೀತು ಮಾಡಿದರು.