SPECIAL REPORT | ಉರುಳಿದೆ 90 ದಿನ, ಪ್ರಶಸ್ತಿಯೂ ಇಲ್ಲ, ಜನ್ಮದಿನೋತ್ಸವವೂ ಇಲ್ಲ, ಕಡಲತಡಿಯ ಭಾರ್ಗವಗೆ ಅವಮಾನ ಸರಿಯೇ?

ವರದಿ: ಐ.ಬಿ. ಸಂದೀಪ್ ಕುಮಾರ್

ಪುತ್ತೂರು

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಕೋಟ ಶಿವರಾಮ ಕಾರಂತರ ಕರ್ಮಭೂಮಿ ಪುತ್ತೂರಿನ ಪರ್ಲಡ್ಕದಲ್ಲಿರುವ ಬಾಲವನದಲ್ಲಿ ಡಾ. ಕೋಟ ಶಿವರಾಮ ಕಾರಂತರ ಜನ್ಮ ದಿನೋತ್ಸವವನ್ನು ಪ್ರತೀ ವರ್ಷ ಅ. 10ರಂದು ಸಂಭ್ರಮದಿಂದ ಆಚರಿಸಲಾಗುತ್ತದೆ. ಇದೇ ಸಂದರ್ಭ ಕಾರಂತರ ಹೆಸರಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ ಸಾಧಕರಿಗೆ ‘ಕಾರಂತ ಬಾಲವನ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗುತ್ತದೆ. ಆದರೆ, ಈ ಬಾರಿ 2024ನೇ ಸಾಲಿನ ಪ್ರಶಸ್ತಿ ಇದುವರೆಗೂ ನೀಡದೆ ಅವಗಣನೆ ಮಾಡಲಾಗಿದೆ!

ಇದುವರೆಗೆ ಸಭೆಯೇ ನಡೆದಿಲ್ಲ!

ಕರ್ನಾಟಕ ಸರಕಾರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಪರ್ಲಡ್ಕದ ಡಾ. ಕೋಟ ಶಿವರಾಮ ಕಾರಂತ ಬಾಲವನ ಮತ್ತು ಸಹಾಯಕ ಆಯುಕ್ತರ ಕಾರ್ಯಾಲಯದ ವತಿಯಿಂದ ಕಾರಂತರ ಹುಟ್ಟಿದ ದಿನವಾದ ಅ. 10ರಂದು ಈ ಪ್ರಶಸ್ತಿ ನೀಡಲಾಗುತ್ತಿತ್ತು. ಆದರೆ, ವಿಧಾನ ಪರಿಷತ್ ಚುನಾವಣೆ ಘೋಷಣೆಯಾದ ಹಿನ್ನಲೆಯಲ್ಲಿ 2024ರ ಬಾಲವನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಂದೂಡಲಾಗಿತ್ತು. ವಿಶೇಷವೆಂದರೆ ಅದಾಗಿ‌ ಇದುವರೆಗೂ ಬಾಲವನ ಪ್ರಶಸ್ತಿಗೆ ಯಾವುದೇ ಸಾಧಕರನ್ನು ಆಯ್ಕೆ ಮಾಡಲಾಗಿಲ್ಲ. ಮಾತ್ರವಲ್ಲದೆ, ಡಾ. ಕಾರಂತರ ಜನ್ಮ ದಿನೋತ್ಸವ ಆಚರಣೆ ಮತ್ತು ಪ್ರಶಸ್ತಿ ಪ್ರದಾನ ಕುರಿತಂತೆ ಬಾಲವನ ಪ್ರಶಸ್ತಿ ಆಯ್ಕೆ ಸಮಿತಿಯನ್ನೇ ರಚಿಸಲಾಗಿಲ್ಲ!

ಕಾರಂತರ ಅಭಿಮಾನಿಗಳಿಗೆ ನಿರಾಸೆ

ಡಾ. ಶಿವರಾಮ ಕಾರಂತರು ಹುಟ್ಟಿದ್ದು 1902 ಅಕ್ಟೋಬರ್ 10ರಂದು ಉಡುಪಿ ಜಿಲ್ಲೆಯ ಕೋಟದಲ್ಲಿ. ಆದರೆ, ಪುತ್ತೂರಿನ ಪರ್ಲಡ್ಕದಲ್ಲಿ ಬಂದು ನೆಲೆಸಿದ ಕಾರಂತರು ಸುಮಾರು 40 ವರ್ಷಗಳ ಕಾಲ ಅವರ ಕರ್ಮಭೂಮಿಯನ್ನಾಗಿ ಮಾಡಿಕೊಂಡಿದ್ದರು. ಕಾರಂತರು 96 ವರ್ಷಗಳ ಸುದೀರ್ಘ ಬಾಳನ್ನು ಕಂಡು ಸುಮಾರು 427 ಪುಸ್ತಕಗಳನ್ನು ರಚಿಸಿ ಸಾಹಿತ್ಯ ಜಗತ್ತಿನ ಕಣ್ಮಣಿಯಾಗಿ ಉಳಿದವರು. ಅವುಗಳಲ್ಲಿ ಒಟ್ಟು 47 ಕಾದಂಬರಿಗಳು ಸೇರಿವೆ. ಕಾರಂತರು ತಮ್ಮ 96 ವಯಸ್ಸಿನಲ್ಲೂ ಹಕ್ಕಿಗಳ ಕುರಿತು ಒಂದು ಪುಸ್ತಕವನ್ನು ಬರೆದಿದ್ದರು. ಈ ಹಿನ್ನಲೆಯಲ್ಲಿ ಡಾ. ಕಾರಂತರ ಹೆಸರಿನಲ್ಲಿ ರಾಜ್ಯದ ವಿವಿಧ ಕ್ಷೇತ್ರಗಳ ಸಾಧಕರಿಗೆ ಬಾಲವನ ಪ್ರಶಸ್ತಿಯನ್ನು ನೀಡುವ ಮೂಲಕ ಅವರಿಗೆ ವಿಶೇಷ ಗೌರವವನ್ನು ಸಲ್ಲಿಸುವ ಕೈಕಂರ್ಯ ತೊಡಲಾಗಿತ್ತು. ಆದರೆ, 2024ನೇ ಸಾಲಿನ ಪ್ರಶಸ್ತಿಯನ್ನು ಮಾತ್ರ ಇದುವರೆಗೂ ನೀಡದೆ ಡಾ. ಶಿವರಾಮ ಕಾರಂತರ ಅಸಂಖ್ಯಾತ ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡಲಾಗಿದೆ. ಈ ಕುರಿತು ಯಾವುದೇ ಜನಪ್ರತಿನಿಧಿಯೂ ಚಕಾರವೆತ್ತದಿರುವುದು ವಿಷಾದನೀಯ.

2010ರಲ್ಲಿ ಆರಂಭವಾಗಿತ್ತು…

ಪ್ರತೀ ವರ್ಷ ಅ. 10ರಂದು ಡಾ. ಶಿವರಾಮ ಕಾರಂತ ಬಾಲವನ ಪ್ರಶಸ್ತಿ ಪ್ರದಾನ ಮತ್ತು ಅವರ ಜನ್ಮ ದಿನೋತ್ಸವವನ್ನು ಸಂಭ್ರದಿಂದಲೇ ಆಚರಿಸಲಾಗುತ್ತಿತು. ಆದರೆ, ಈ ಬಾರಿ ಅ.10 ಕಳೆದು ಇಂದಿಗೆ 90 ದಿನಗಳಾಗಿವೆ. 2010ರಲ್ಲಿ ಡಾ. ಶಿವರಾಮ ಕಾರಂತ ಬಾಲವನ ಪ್ರಶಸ್ತಿಯನ್ನು ಆರಂಭಿಸಲಾಗಿತ್ತು. ಪ್ರಥಮ ಪ್ರಶಸ್ತಿಯನ್ನು ಸಾಹಿತಿ ಬೊಳುವಾರು ಮಹಮ್ಮದ್ ಕುಂಞ ಅವರಿಗೆ ಪ್ರದಾನ ಮಾಡಲಾಗಿತ್ತು. ಇದಾದ ಬಳಿಕ 2016ರಲ್ಲೂ ಒಂದು ವರ್ಷ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಡೆಸಲಾಗಿರಲಿಲ್ಲ. ಈ ವರ್ಷ ಮತ್ತೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಕೈ ತಪ್ಪಿ ಹೋಗಿದೆ. ಆರಂಭದಲ್ಲಿ ಪ್ರಶಸ್ತಿ ಮೊತ್ತ ರೂ.5 ಸಾವಿರಗಳಾಗಿತ್ತು. ಬಳಿಕ ಸುಳ್ಯದ ದಿ. ಕುರುಂಜಿ ವೆಂಕಟರಮಣ ಗೌಡ ಅವರ ಶಾಶ್ವತ ಕೊಡುಗೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಪ್ರಶಸ್ತಿ ಮೊತ್ತ ರೂ.25 ಸಾವಿರಗಳಾಗಿವೆ.

ಸಾಧಕರ ಮುಡಿಯೇರಿತ್ತು ಪ್ರಶಸ್ತಿ

ಬೊಳುವಾರು ಮಹಮ್ಮದ್ ಕುಂನ್ಜಿ, ಸಾಹಿತಿ ವೈದೇಹಿ, ಹಿರಿಯ ಸಾಹಿತಿ, ಸಂಶೋಧಕ, ಪ್ರಸಂಗಕರ್ತ ಪ್ರೊ. ಅಮೃತ ಸೋಮೇಶ್ವರ, ಗಣಕ ವಿಜ್ಞಾನಿ ಕೆ.ಪಿ. ರಾವ್, ಕವಿ, ಕಥೆಗಾರ ಜಯಂತ ಕಾಯ್ಕಿಣಿ, ಹೆಗ್ಗೋಡಿನ ಹಿರಿಯ ರಂಗ ನಿರ್ದೇಶಕ ಅಕ್ಷರ ಕೆ.ವಿ., ವರ್ಣ ಚಿತ್ರ ಕಲಾವಿದ ಚಂದ್ರನಾಥ ಕೆ. ಮತ್ತಿತರ ಸಾಧಕರಿಗೆ ಬಾಲವನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಇದು ನಿಜಕ್ಕೂ ವಿಷಾದನೀಯ

2024ನೇ ಸಾಲಿನ ಡಾ. ಶಿವರಾಮ ಕಾರಂತ ಬಾಲವನ ಪ್ರಶಸ್ತಿ ಪ್ರದಾನ ಮತ್ತು ಅವರ ಜನ್ಮ ದಿನೋತ್ಸವವನ್ನು ಆಚರಿಲಾಗದೇ ಇರುವುದು ವಿಷಾದನೀಯ. ವಿಧಾನ ಪರಿಷತ್ ಚುನಾವಣೆಯ ಹಿನ್ನಲೆಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮುಂದೂಡಲಾಗಿದ್ದರೂ ಬಳಿಕ ನಡೆಸಬಹುದಾಗಿತ್ತು. ಕಳೆದ ಸಾಲಿನಲ್ಲಿ ನಾನು ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯನಾಗಿದ್ದೆ. ಈ ಬಾರಿ ಸಮಿತಿ ರಚನೆ ಆಗಿರಲಿಲ್ಲ ಎನ್ನುತ್ತಾರೆ ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!