September 28, 2026
Monday, September 28, 2026
spot_img

ಪಲ್ಯ, ಗ್ರೇವಿ & More 96 | ಖಾರ ಪ್ರಿಯರಿಗಾಗಿ ಸ್ಪೆಷಲ್ ಟೊಮ್ಯಾಟೊ-ಈರುಳ್ಳಿ ಖಾರ ಚಟ್ನಿ: ಒಮ್ಮೆ ಟ್ರೈ ಮಾಡಿ

ಬಿಸಿಬಿಸಿ ಇಡ್ಲಿ ಅಥವಾ ಕ್ರಿಸ್ಪಿ ದೋಸೆಯ ಜೊತೆಗೆ ನಾಲಿಗೆಗೆ ಚುರುಕು ಮುಟ್ಟಿಸುವಂತಹ ಚಟ್ನಿ ಇದ್ದರೆ ತಿನ್ನುವ ಮಜಾವೇ ಬೇರೆ. ನೀವೇನಾದರೂ ಪ್ರತಿದಿನದ ಸಾಮಾನ್ಯ ಕಾಯಿ ಚಟ್ನಿ ತಿಂದು ಬೇಜಾರಾಗಿದ್ದರೆ, ಈ ಹೋಟೆಲ್ ಶೈಲಿಯ ಖಾರ ಚಟ್ನಿ ಅತ್ಯುತ್ತಮ ಆಯ್ಕೆ. ಈರುಳ್ಳಿ, ಟೊಮ್ಯಾಟೊ ಮತ್ತು ಒಣಮೆಣಸಿನಕಾಯಿಯ ಹದವಾದ ಮಿಶ್ರಣದಿಂದ ತಯಾರಾಗುವ ಈ ಚಟ್ನಿ ಕೇವಲ ಹತ್ತೇ ನಿಮಿಷಗಳಲ್ಲಿ ಸಿದ್ಧವಾಗುತ್ತದೆ.

ಬೇಕಾಗುವ ಸಾಮಾಗ್ರಿಗಳು
ಈರುಳ್ಳಿ
ಟೊಮ್ಯಾಟೊ
ಒಣ ಮೆಣಸಿನಕಾಯಿ
ಬೆಳ್ಳುಳ್ಳಿ ಎಸಳು
ಉದ್ದಿನಬೇಳೆ
ಕಡಲೆಬೇಳೆ
ಹುಣಸೆಹಣ್ಣು
ಎಣ್ಣೆ
ಉಪ್ಪು
ಸಾಸಿವೆ
ಕರಿಬೇವು
ಇಂಗು

ಮಾಡುವ ವಿಧಾನ
ಮೊದಲು ಒಂದು ಬಾಣಲೆಯಲ್ಲಿ 1 ಚಮಚ ಎಣ್ಣೆ ಬಿಸಿ ಮಾಡಿ, ಕಡಲೆಬೇಳೆ ಮತ್ತು ಉದ್ದಿನಬೇಳೆ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ನಂತರ ಒಣ ಮೆಣಸಿನಕಾಯಿ ಹಾಗೂ ಬೆಳ್ಳುಳ್ಳಿ ಸೇರಿಸಿ ಒಂದು ನಿಮಿಷ ಫ್ರೈ ಮಾಡಿ ತಟ್ಟೆಗೆ ತೆಗೆದಿಟ್ಟುಕೊಳ್ಳಬೇಕು. ನಂತರ ಅದೇ ಬಾಣಲೆಗೆ ಮತ್ತೊಂದು ಚಮಚ ಎಣ್ಣೆ ಹಾಕಿ, ಕತ್ತರಿಸಿದ ಈರುಳ್ಳಿ ಸೇರಿಸಿ ಪಾರದರ್ಶಕವಾಗುವವರೆಗೆ ಹುರಿಯಿರಿ. ಬಳಿಕ ಟೊಮ್ಯಾಟೊ ಮತ್ತು ಸ್ವಲ್ಪ ಉಪ್ಪು ಹಾಕಿ, ಟೊಮ್ಯಾಟೊ ಮೃದುವಾಗುವವರೆಗೆ ಚೆನ್ನಾಗಿ ಬೇಯಿಸಬೇಕು. ಹುರಿದ ಮಿಶ್ರಣ ಸಂಪೂರ್ಣವಾಗಿ ತಣ್ಣಗಾದ ನಂತರ, ಅದನ್ನು ಮಿಕ್ಸಿ ಜಾರಿಗೆ ಹಾಕಿ. ಅದಕ್ಕೆ ಹುಣಸೆಹಣ್ಣು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಸ್ವಲ್ಪವೇ ನೀರು ಹಾಕಿ ನುಣ್ಣಗೆ ರುಬ್ಬಬೇಕು. ನಂತರ ರುಬ್ಬಿದ ಚಟ್ನಿಯನ್ನು ಒಂದು ಪಾತ್ರೆಗೆ ವರ್ಗಾಯಿಸಿ. ಸಣ್ಣ ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಉದ್ದಿನಬೇಳೆ ಮತ್ತು ಕರಿಬೇವು ಹಾಕಿ ಒಗ್ಗರಣೆ ತಯಾರಿಸಿ, ಅದನ್ನು ಚಟ್ನಿಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿದರೆ ಬಿಸಿಬಿಸಿಯಾದ ಇಡ್ಲಿ ಅಥವಾ ಕ್ರಿಸ್ಪಿ ದೋಸೆಯೊಂದಿಗೆ ಸವಿಯಲು ಸುವಾಸನೆಯುಕ್ತ ಖಾರ ಚಟ್ನಿ ಸಿದ್ಧವಾಗುತ್ತದೆ.

Must Read