Special Story | ಸಾಂಪ್ರದಾಯಿಕ ನಂಬರ್ ಪ್ಲೇಟ್ ತಯಾರಕರನ್ನು ಕಂಗಾಲಾಗಿಸಿದೆ ‘ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್’

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

  • ಐ.ಬಿ. ಸಂದೀಪ್ ಕುಮಾರ್

ಪುತ್ತೂರು: ಸಾರಿಗೆ ಇಲಾಖೆಯು ಹೊಸ ವಾಹನಗಳು ಸೇರಿದಂತೆ ಏಪ್ರಿಲ್ 1, 2019ರ ಮೊದಲು ನೋಂದಾಯಿಸಲಾದ ಎಲ್ಲಾ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಅಳವಡಿಸುವುದನ್ನು ಕಡ್ಡಾಯಗೊಳಿಸಿದ್ದು, ನ.17ರೊಳಗಾಗಿ ಎಲ್ಲಾ ರೀತಿಯ ವಾಹನಗಳ ನೋಂದಣಿ ಫಲಕಗಳನ್ನು ಕಡ್ಡಾಯವಾಗಿ ಬದಲಾಯಿಸಲೇಬೇಕಾಗಿದೆ. ಆದರೆ, ಈ ಕುರಿತು ಇನ್ನೂ ಸಾರ್ವಜನಿಕರಿಗೆ ಸೂಕ್ತ ಮಾಹಿತಿಯೇ ಇಲ್ಲ. ಈ ನಿಯಮವನ್ನು ಅನುಸರಿಸಲು ವಿಫಲರಾದ ವಾಹನಗಳ ಮಾಲಕರಿಗೆ ರೂ.500 ರಿಂದ 1000 ರವರೆಗೆ ದಂಡ ವಿಧಿಸಲು ಕ್ರಮ ಕೈಗೊಳ್ಳಲಾಗಿದೆ. ಸರಕಾರದ ಈ ಹೊಸ ನಿಯಮದಿಂದ ಸಾಂಪ್ರದಾಯಿಕವಾಗಿ ನಂಬರ್ ಪ್ಲೇಟ್‌ಗಳನ್ನು ಸಿದ್ಧಪಡಿಸಿಕೊಡುತ್ತಿದ್ದ ಸಹಸ್ರಾರು ಸಾಂಪ್ರದಾಯಿಕ ನಂಬರ್ ಪ್ಲೇಟ್ ತಯಾರಕರು ಮತ್ತು ಮಾರಾಟಗಾರರು ಕಂಗಾಲಾಗಿದ್ದಾರೆ.

ಏನಿದು ಎಚ್‌ಎಸ್‌ಆರ್‌ಪಿ…?:
ವಾಹನಗಳ ನಂಬರ್ ಪ್ಲೇಟ್ ಮೇಲೆ ಲೇಸರ್ ತಂತ್ರಜ್ಞಾನದಲ್ಲಿ ಅಕ್ಷರಗಳನ್ನು ಮುದ್ರಿಸಲಾಗಿರುತ್ತದೆ. ಪ್ರತಿಯೊಂದು ನಂಬರ್ ಪ್ಲೇಟ್‌ಗೂ ಒಂದು ಸೀರಿಯಲ್ ನಂಬರ್ ಕೊಡಲಾಗುತ್ತದೆ. ಆ ನಂಬರನ್ನು ಸಾರಿಗೆ ಇಲಾಖೆಯ ವಾಹನನ ತಂತ್ರಾಂಶಕ್ಕೆ ಜೋಡಣೆ ಮಾಡಲಾಗಿದೆ. ಆದರೆ, ಅನಧಿಕೃತ ಸಂಸ್ಥೆಗಳು ಮತ್ತು ವ್ಯಕ್ತಿಗಳಿಂದ ಖರೀದಿಸುವ ನಂಬರ್ ಪ್ಲೇಟೆಗಳಲ್ಲಿ ಸೀರಿಯಲ್ ಸಂಖ್ಯೆಯೂ ಇರುವುದಿಲ್ಲ. ವಾಹನ-4 ತಂತ್ರಾಂಶಕ್ಕೂ ಜೋಡಣೆ ಆಗಿರುವುದಿಲ್ಲ. ಆದ್ದರಿಂದ ಇಂತಹ ಫಲಕಗಳನ್ನು ಅಳವಡಿಸಿದರೂ ಪೊಲೀಸರಿಗೆ ಸಿಕ್ಕಿಬಿದ್ದ ಬಳಿಕ ದಂಡ ಕಟ್ಟುವ ಜತೆಗೆ ಪುನಃ ಹಣ ಪಾವತಿಸಿ ಹೊಸದಾಗಿ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ವಾಹನಗಳ ಮಾಲಕರು ಎಚ್ಚರ ವಹಿಸಬೇಕಾಗಿದೆ.

50 ಸಾವಿರ ಅಂಗಡಿಗಳು
ರಾಜ್ಯದಲ್ಲಿ ವಾಹನಗಳಿಗೆ ನಂಬರ್ ಪ್ಲೇಟ್‌ಗಳನ್ನು ಸಿದ್ಧಪಡಿಸಿಕೊಡುವ ಸುಮಾರು 50 ಸಾವಿರ ಅಂಗಡಿಗಳಿವೆ. ಇಂತಹ ಅಂಗಡಿಗಳ ಮಾಲಕರು ವಾಹನಗಳಿಗೆ ನಂಬರ್ ಪ್ಲೇಟ್‌ಗಳನ್ನು ಸಿದ್ಧಪಡಿಸಿಕೊಡಲು ಕಾಲಕ್ಕೆ ತಕ್ಕಂತೆ ಹೊಸ ಹೊಸ ಯಂತ್ರೋಪಕರಣಗಳನ್ನು ಅಳವಡಿಸಿಕೊಂಡು ಬರುತ್ತಿದ್ದಾರೆ. ಆದರೆ, ಇದೀಗ ನಂಬರ್ ಪ್ಲೇಟ್‌ಗಳನ್ನು ಸಿದ್ಧಪಡಿಸಿಕೊಡುವ ಗುತ್ತಿಗೆಯನ್ನು ದೇಶದ ಸುಮಾರು 8 ಕಂಪೆನಿಗಳಿಗೆ ಗುತ್ತಿಗೆ ನೀಡಿರುವ ಕಾರಣದಿಂದ ಸಣ್ಣಪುಟ್ಟ ಅಂಗಡಿಗಳ ಮಾಲಕರಿಗೆ ದಿಕ್ಕು ತೋಚದಂತಾಗಿದೆ. ಹೊಸ ವಾಹನಗಳಿಗೆ ವಾಹನಗಳ ಕಂಪೆನಿಗಳೇ ನಂಬರ್ ಪ್ಲೇಟ್‌ಗಳನ್ನು ಅಳವಡಿಸಿ ಕೊಡುತ್ತದೆ. ಆದರೆ, 2019ಕ್ಕಿಂತ ಮೊದಲು ನೋಂದಾವಣೆ ಆಗಿರುವಂತಹ ಕೋಟ್ಯಾಂತರ ವಾಹನಗಳಿಗೆ ನಂಬರ್ ಅಳವಡಿಸಲು ಸ್ಥಳೀಯ ಉದ್ದಿಮೆದಾರರಿಗೆ ನೀಡಬೇಕೆಂಬುದು ಅವರ ಬೇಡಿಕೆ. ಅಖಿಲ ಕರ್ನಾಟಕ ವಾಹನ ನಂಬರ್ ಪ್ಲೇಟ್ ತಯಾರಕರು ಮತ್ತು ಮಾರಾಟಗಾರರ ಸಂಘ, ಮಂಗಳೂರಿನ ದ.ಕ. ಜಿಲ್ಲಾ ನಾಮಫಲಕ ಕಲಾಗಾರರ ಸಂಘ ಈ ಕುರಿತು ಹೋರಾಟದ ಹಾದಿ ಹಿಡಿದಿವೆ.

ನಕಲಿ ನಂಬರ್ ಪ್ಲೇಟ್‌ಗಳು
ಸರಕಾರದ ಕಡ್ಡಾಯ ನಿಯಮವನ್ನೇ ದುರ್ಬಳಕೆ ಮಾಡಿಕೊಂಡು ವಾಹನಗಳ ಮಾಲಕರಿಗೆ ವಂಚಿಸುತ್ತಿರುವ ಪ್ರಕರಣಗಳು ನಡೆಯುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಸಣ್ಣಪುಟ್ಟ ಅಂಗಡಿಗಳು, ಮೆಕಾನಿಕ್ ಶಾಪ್‌ಗಳು, ಏಜೆನ್ಸಿಗಳು ಹಾಗೂ ಕೆಲವೊಂದು ಸಂಸ್ಥೆಗಳು, ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಳು ಎಂದೇಳಿ ಸಾಮಾನ್ಯ ನಂಬರ್ ಪ್ಲೇಟ್‌ಗಳನ್ನು ಅಳವಡಿಸಿ ಹಣ ಮಾಡುತ್ತಿರುವ ಆರೋಪಗಳು ಕೇಳಿ ಬಂದಿವೆ. ಇಂತಹ ನಕಲಿ ನಂಬರ್ ಪ್ಲೇಟ್‌ಗಳಲ್ಲಿ ಹೋಲೋಗ್ರಾಮ್ ಸ್ಟಿಕ್ಕರ್‌ಗಳನ್ನು ಅಂಟಿಸಿ ನಿಗದಿಪಡಿಸಲಾಗಿರುವ ಅಸಲಿ ದರಕ್ಕಿಂತ ಅಧಿಕ ಹಣವನ್ನು ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದೆ. ಇದು ಸ್ಥಳೀಯವಾಗಿ ವಂಚನೆರಹಿತ ವ್ಯವಹಾರ ನಡೆಸುತ್ತಿದ್ದ ಎಂಟರ್‌ಪ್ರೈಸಸ್‌ಗಳ ಮಾಲಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಜತೆಗೆ, ಮಂಗಳೂರಿನ ದ.ಕ. ಜಿಲ್ಲಾ ನಾಮಫಲಕ ಕಲಾಗಾರರ ಸಂಘ ಸೆ.೧೩ ರಂದು ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿ ಸ್ಥಳೀಯರಿಗೂ ಅವಕಾಶ ನೀಡುವಂತೆ ಕೋರಿದೆ.

ಕಳಪೆ ಗುಣಮಟ್ಟ…?
ಪ್ರಸ್ತುತ ವಾಹನಗಳ ಕಂಪೆನಿಗಳು ಹೊಸ ವಾಹನಗಳಿಗೆ ಅಳವಡಿಸುವ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಳು ಸೂಕ್ತ ಮಾನದಂಡವನ್ನು ಅನುಸರಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಒಂದೊಂದು ಕಂಪೆನಿಗಳ ನಂಬರ್ ಪ್ಲೇಟ್‌ಗಳು ಒಂದೊಂದು ರೀತಿ ಇರುತ್ತದೆ, ಇದರ ಗುಣಮಟ್ಟವೂ ಚೆನ್ನಾಗಿಲ್ಲ ಎಂದು ಗ್ರಾಹಕರು ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.

ಏಕೀಕೃತ ಪೋರ್ಟಲ್
ಸಾರಿಗೆ ಇಲಾಖೆ ಅಧಿಕಾರಿಗಳ ಪ್ರಕಾರ ಕರ್ನಾಟಕದಲ್ಲಿ ಸುಮಾರು 2.15 ಕೋಟೆ ಹಳೆಯ ವಾಹನಗಳಿವೆ. 2019ರಿಂದ ಹಿಂದಿನ 15 ವರ್ಷದಲ್ಲಿ ನೋಂದಣಿಯಾಗಿರುವ ವಾಹನಗಳು ಸುಮಾರು 1.70 ಕೋಟಿ ವಾಹನಗಳಿವೆ. ಎಲ್ಲ ವಾಹನಗಳಿಗೆ ಸೆಕ್ಯುರಿಟಿ ಸಂಬ ಪ್ಲೇಟ್ ಅಳವಡಿಸಿದರೆ ಅಂದಾಜು ರೂ.500 ರಿಂದ 1000 ಕೋಟಿ ವಹಿವಾಟು ನಡೆಯಲಿದೆ ಎಂದು ಅಂದಾಜಿಸಲಾಗಿದೆ. ಹಳೆಯ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಲು 2023 ರ ನ.19 ರವರೆಗೆ ಸಾರಿಗೆ ಇಲಾಖೆ ಅವಕಾಶ ನೀಡಿದೆ. ಸಾರಿಗೆ ಇಲಾಖೆ ಅನುಮತಿ ನೀಡಿರುವ ಡೀಲರ್ ಬಾಯಿಂಟ್‌ಗಳು ಯಾವುದು? ಎಲ್ಲೆಲ್ಲಿವೆ? ಎಂದು ತಿಳಿದುಕೊಳ್ಳಲು ಹಾಗೂ ನಂಬರ್ ಪ್ಲೇಟ್ ಅರ್ಡರ್ ಮಾಡಲು ‘ಡಬ್ಲ್ಯುಡಬ್ಲ್ಯುಡಬ್ಲ್ಯು.ಎಸ್‌ಐಎಎಂ.ಐಎನ್’ ಏಕೀಕೃತ ಪೋರ್ಟಲ್ ರೂಪಿಸಲಾಗಿದೆ.

ಸ್ಥಳೀಯ ಎಂಟರ್‌ಪ್ರೈಸಸ್‌ಗಳಿಗೆ ಉಪಗುತ್ತಿಗೆ ನೀಡಿ
ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ನಿಯಮ ಕಡ್ಡಾಯಗೊಳಿಸಿ ಅದರ ಗುತ್ತಿಗೆಯನ್ನು ಕೆಲವೇ ಕಂಪೆನಿಗಳಿಗೆ ನೀಡಿರುವುದು ಸರಿಯಲ್ಲ. ಇದರ ವಿರುದ್ಧ ಹೈಕೋರ್ಟ್ ಮೆಟ್ಟಲೇರಿದ್ದರೂ ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿದೆ. ಇದರಿಂದ ಸಾಂಪ್ರದಾಯಿಕವಾಗಿ ನಂಬರ್ ಪ್ಲೇಟ್ ಸಿದ್ಧಪಡಿಸಿಕೊಡುತ್ತಿದ್ದ ಸಾವಿರಾರು ಎಂಟರ್‌ಪ್ರೈಸಸ್‌ಗಳ ಮಾಲಕರು ಬೀದಿಗೆ ಬೀಳುವಂತಾಗಿದೆ. ಈ ನಿಟ್ಟಿನಲ್ಲಿ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಸಿದ್ಧಪಡಿಸಿಕೊಡುವ ಉಪಗುತ್ತಿಗೆಯನ್ನಾದರೂ ಸ್ಥಳೀಯ ಎಂಟರ್‌ಪ್ರೈಸಸ್‌ಗಳಿಗೆ ನೀಡಲು ಸರಕಾರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಸಹಸ್ರಾರು ಕುಟುಂಬಗಳು ಬೀದಿಗೆ ಬೀಳುವಂತಾಗುತ್ತದೆ ಎಂದು ನಂಬರ್ ಪ್ಲೇಟ್ ತಯಾರಕರು ಮತ್ತು ಮಾರಾಟಗಾರರ ರಾಜ್ಯ ಸಂಘದ ಪ್ರಮುಖರು, ಸತೀಶ್ ಶಿವರಾಜ್ ಬೆಂಗಳೂರು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!