ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಮತ್ತೆ ಸಂಕಷ್ಟ ಎದುರಿಸುವಂತಾಗಿದ್ದು, ಜೈಲಲ್ಲೇ ನಟ ದರ್ಶನ್ ವಿಚಾರಣೆಗೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ಗೆ ರಾಜಾತಿಥ್ಯ ಹಾಗೂ ಮೊಬೈಲ್ ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆಗೆ ಸಿದ್ಧತೆ ನಡೆಸಿದ್ದು, ದರ್ಶನ್ ವಿಚಾರಣೆಗೆ ಕೋರ್ಟ್ ಅನುಮತಿ ಪಡೆಯಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ಅಂತೆಯೇ ಒಂದು ವೇಳೆ ದರ್ಶನ್ ತನಿಖೆಗೆ ಸಹಕಾರ ಕೊಟ್ಟಿಲ್ಲ ಅಂದರೆ ವಶಕ್ಕೆ ಪಡೆಯಲು ಅಧಿಕಾರಿಗಳು ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಆಗ್ನೇಯ ವಿಭಾಗ ಪೊಲೀಸರು ಮೂರು ಆಯಾಮದಲ್ಲಿ ತನಿಖೆಗೆ ಮುಂದಾಗಿದ್ದು, ತನಿಖೆ ಜೊತೆಗೆ ಮಹಜರು ಪ್ರಕ್ರಿಯೆ ಕೂಡ ನಡೆಯಲಿದೆ. ದರ್ಶನ್ ಹಾಗೂ ವಿಲ್ಸನ್ ಗಾರ್ಡನ್ ನಾಗ ಕುಳಿತಿದ್ದ ಜಾಗ, ದರ್ಶನ್ ವೀಡಿಯೊ ಕಾಲ್ ಮಾಡಿದ್ದ ಜಾಗದ ಮಹಜರು ನಡೆಯಲಿದೆ ಎಂದು ಹೇಳಲಾಗಿದೆ.