ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಪೈಸ್‌ಜೆಟ್ ವಿಮಾನದ ಮಹಿಳಾ ಸಿಬ್ಬಂದಿಯೊಬ್ಬರು ಸಿಐಎಸ್‌ಎಫ್ ಯೋಧನಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಜೈಪುರ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಕಪಾಳಮೋಕ್ಷ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ. ಮಹಿಳಾ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಭದ್ರತಾ ತಪಾಸಣೆ ವೇಳೆ ಯೋಧ ತನಗೆ ಲೈಂಗಿಕ ಕಿರುಕುಳ ನೀಡಿದನೆಂದು ಮಹಿಳೆ ಆರೋಪಿಸಿದ್ದಾರೆ.
ಅನುರಾಧಾ ರಾಣಿ ಅವರು ಬೆಳಗ್ಗೆ 4 ಗಂಟೆ ಸುಮಾರಿಗೆ ಇತರ ಸಿಬ್ಬಂದಿಗಳೊಂದಿಗೆ ವಿಮಾನ ನಿಲ್ದಾಣಕ್ಕೆ ಪ್ರವೇಶಿಸುತ್ತಿದ್ದಾಗ ಅನುಮತಿಯಿಲ್ಲದ ಕಾರಣ ಆಕೆಯನ್ನು ಸಹಾಯಕ ಸಬ್ ಇನ್ಸ್‌ಪೆಕ್ಟರ್ ಗಿರಿರಾಜ್ ಪ್ರಸಾದ್ ತಡೆದರು. ನಂತರ ಅನುರಾಧಾ ಅವರನ್ನು ಹತ್ತಿರದ ಪ್ರವೇಶದ್ವಾರದಲ್ಲಿ ಏರ್‌ಲೈನ್ ಸಿಬ್ಬಂದಿಗೆ ತಪಾಸಣೆಗೆ ಒಳಪಡಿಸುವಂತೆ ಕೇಳಲಾಯಿತು. ಆದರೆ ಆ ಸಮಯದಲ್ಲಿ ಯಾವುದೇ ಮಹಿಳಾ ಸಿಐಎಸ್‌ಎಫ್ ಸಿಬ್ಬಂದಿ ಇರಲಿಲ್ಲ. ವಾಗ್ವಾದ ಹೆಚ್ಚಾಗಿದ್ದು ಅನುರಾಧಾ ರಾಣಿ ಕಪಾಳಕ್ಕೆ ಬಾರಿಸಿದ್ದಾರೆ, ಸದ್ಯ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.