‘ಕ್ರೀಡೆ’ ಮನರಂಜನೆಯಲ್ಲ, ಅದೊಂದು ಶಿಕ್ಷಣ, ಸಂಸ್ಕೃತಿ, ಮನೋಧರ್ಮ: ಡಾ.ನಿರ್ಮಲಾನಂದನಾಥ ಸ್ವಾಮೀಜಿ

ಹೊಸ ದಿಗಂತ ವರದಿ, ನಾಗಮಂಗಲ :

ಕ್ರೀಡೆ ಎನ್ನುವುದು ಕೇವಲ ಮನರಂಜನೆಯಲ್ಲ. ಅದೊಂದು ಶಿಕ್ಷಣ, ಸಂಸ್ಕೃತಿ, ಮನೊಧರ್ಮ ಮತ್ತು ಸಂಶೋಧನೆಯಿದ್ದಂತೆ. ಕ್ರೀಡೆಯಲ್ಲಿ ನಾವು ಹೇಗೆ ತೊಡಗಿಸಿಕೊಳ್ಳಬೇಕೆಂಬುದನ್ನು ಕಲಿಯಬಹುದು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಸ್ವಾಮೀಜಿ ತಿಳಿಸಿದರು.

ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಬಿಜಿಎಸ್ ಕ್ರೀಡಾಂಗಣದಲ್ಲಿ ರಾಜ್ಯ ಸರ್ಕಾರ ಹಾಗೂ ಶಾಲಾ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆಯ ಸಹಭಾಗಿತ್ವದಲ್ಲಿ ನಾಲ್ಕು ದಿನಗಳ ಕಾಲ ನಡೆದ ಸ್ಕೂಲ್‌ಗೇಮ್ಸ್‌ ಫೆಡರೇಷನ್ ಆಫ್ ಇಂಡಿಯಾ 67ನೇ ರಾಷ್ಟ್ರಮಟ್ಟದ 19ವರ್ಷದೊಳಗಿನ ಬಾಲಕ ಬಾಲಕಿಯರ ಕಬ್ಬಡಿ ಪಂದ್ಯಾವಳಿಯ ಸಮಾರೋಪ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದರು.

ಯಾವುದೇ ಕ್ರೀಡೆಯಲ್ಲಿ ಒಂದು ತಂಡ ಗೆಲುವು ಸಾಧಿಸಿದರೆ ಮತ್ತೊಂದು ಸೋಲುವುದು ಸಹಜ. ಆದರೆ ಭಾಗವಹಿಸುವಿಕೆ ಬಹಳ ಮುಖ್ಯವಾಗುತ್ತದೆ. ಕ್ರೀಡಾ ನಿಯಮಗಳನ್ನು ಅರ್ಥೈಸಿಕೊಂಡು ಕ್ರೀಡಾ ಸ್ಪೂರ್ತಿಯಿಂದ ಆಟವಾಡಿದರೆ ಮಾತ್ರ ಗೆಲುವು ಸಾಧಿಸಲು ಸಾಧ್ಯವಾಗುತ್ತದೆ ಎಂದರು.

ಮಹಾನ್ ಸಾಧು ಸಂತರು ತಪಸ್ಸು ಮಾಡಿರುವ ಈ ತಪೋಭೂಮಿಯಲ್ಲಿ 67ನೇ ರಾಷ್ಟ್ರಮಟ್ಟದ ಕಬಡ್ಡಿ ಕ್ರೀಡಾಕೂಟ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಭಾಗವಹಿಸಿದ ಎಲ್ಲಾ ತಂಡಗಳನ್ನು ಒಂದೇ ದೃಷ್ಟಿಯಿಂದ ಪರಿಗಣಿಸುವುದರೊಂದಿಗೆ ಯಾವುದೇ ಪಕ್ಷಪಾತಕ್ಕೆ ಎಡೆ ಮಾಡಿಕೊಡದಂತೆ ನಾಲ್ಕು ದಿನಗಳ ಕಾಲ ಕ್ರೀಡಾ ಕೂಟದ ಆಯೋಜನೆ ನಡೆದಿದೆ ಎಂದು ಹೇಳಿದರು.

ಎಲ್ಲ ರೀತಿಯ ಪ್ರತ್ಯೇಕತೆ ವೈರುಧ್ಯಗಳನ್ನು ಮರೆತು ತಾವೆಲ್ಲರೂ ಅತ್ಯಂತ ಸಂತೋಷದಿಂದ ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದೀರಿ. ಶ್ರೀ ಕ್ಷೇತ್ರದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅತ್ಯಂತ ಪ್ರೀತಿಯಿಂದ ಎಲ್ಲಾ ತಂಡಗಳನ್ನು ಉಪಚರಿಸಿದ್ದಾರೆ. ಕ್ರೀಡಾಕೂಟದ ಸುಮಧುರ ನೆನಪುಗಳೊಂದಿಗೆ ತಾವೆಲ್ಲರೂ ನಿಮ್ಮ ರಾಜ್ಯಗಳಿಗೆ ತೆರಳುತ್ತಿದ್ದೀರಿ. ಮುಂದೊಂದು ದಿನ ಕರ್ನಾಟಕ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶ್ರೀಕ್ಷೇತ್ರಕ್ಕೆ ಮತ್ತೊಮ್ಮೆ ಬಂದು ಹೋಗಿ ಎಂದು ಆಶೀರ್ವದಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!