ಹೊಸದಿಗಂತ ಬೆಂಗಳೂರು:
ಜಗತ್ತಿನ ಪ್ರತಿಷ್ಠಿತ ‘ವಿಶ್ವ ಅಥ್ಲೆಟಿಕ್ಸ್ ಗೋಲ್ಡ್ ಲೇಬಲ್’ ರೇಸ್ ಆದ ಟಾಟಾ ಮುಂಬೈ ಮ್ಯಾರಥಾನ್ ತನ್ನ 21ನೇ ಆವೃತ್ತಿಗೆ ಸಜ್ಜಾಗುತ್ತಿದೆ. 2026ರ ಜನವರಿ 18ರಂದು ನಡೆಯಲಿರುವ ಈ ಕ್ರೀಡಾ ಹಬ್ಬಕ್ಕೆ ವಿಶ್ವವಿಖ್ಯಾತ ಸ್ಪ್ರಿಂಟರ್, ಕೆನಡಾದ ಒಲಿಂಪಿಕ್ ಚಾಂಪಿಯನ್ ಆಂಡ್ರೆ ಡಿ ಗ್ರಾಸ್ ಅವರನ್ನು ಅಂತರರಾಷ್ಟ್ರೀಯ ಈವೆಂಟ್ ಅಂಬಾಸಿಡರ್ ಆಗಿ ಘೋಷಿಸಲಾಗಿದೆ.
ಆಂಡ್ರೆ ಡಿ ಗ್ರಾಸ್ ಕೇವಲ ಓಟಗಾರನಲ್ಲ, ಅಥ್ಲೆಟಿಕ್ಸ್ ಲೋಕದ ಅದ್ಭುತ ಶಕ್ತಿ. ಒಟ್ಟು 7 ಒಲಿಂಪಿಕ್ ಪದಕಗಳು. ಇದರಲ್ಲಿ ಟೋಕಿಯೊ ಒಲಿಂಪಿಕ್ಸ್ನ 200 ಮೀಟರ್ ಓಟದ ಚಿನ್ನ ಮತ್ತು ಇತ್ತೀಚಿನ ಪ್ಯಾರಿಸ್ 2024ರ ಒಲಿಂಪಿಕ್ಸ್ನಲ್ಲಿ ಕೆನಡಾ ತಂಡಕ್ಕೆ ತಂದುಕೊಟ್ಟ 4×100 ಮೀಟರ್ ರಿಲೇ ಚಿನ್ನದ ಪದಕ ಪ್ರಮುಖವಾದವು.
5 ಆವೃತ್ತಿಗಳಲ್ಲಿ ಭಾಗವಹಿಸಿ 6 ಪದಕಗಳನ್ನು ಮುಡಿಗೇರಿಸಿಕೊಂಡಿರುವ ಇವರು, ಆಧುನಿಕ ಯುಗದ ಸ್ಪ್ರಿಂಟ್ ರಾಜ ಎನಿಸಿಕೊಂಡಿದ್ದಾರೆ.
ಕೇವಲ ಮೈದಾನದಲ್ಲಷ್ಟೇ ಅಲ್ಲ, ‘ಡಿ ಗ್ರಾಸ್ ಫ್ಯಾಮಿಲಿ ಫೌಂಡೇಶನ್’ ಮೂಲಕ ಬಡ ಯುವಕರಿಗೆ ಶಿಕ್ಷಣ ಮತ್ತು ಕ್ರೀಡೆಯಲ್ಲಿ ನೆರವಾಗುತ್ತಾ ನಿಜ ಜೀವನದ ಹೀರೋ ಆಗಿದ್ದಾರೆ.
ಈ ಗೌರವದ ಬಗ್ಗೆ ಮಾತನಾಡಿದ ಡಿ ಗ್ರಾಸ್, “ಓಟ ಎನ್ನುವುದು ಕೇವಲ ಸ್ಪರ್ಧೆಯಲ್ಲ, ಅದು ಶಿಸ್ತು ಮತ್ತು ಸ್ಥೈರ್ಯದ ಪಾಠ. ಟಾಟಾ ಮುಂಬೈ ಮ್ಯಾರಥಾನ್ ಜನರ ಧೈರ್ಯ ಮತ್ತು ಸಂಕಲ್ಪದ ಸಂಕೇತವಾಗಿದೆ. ಈ ಐಕಾನಿಕ್ ಈವೆಂಟ್ನ ಭಾಗವಾಗುತ್ತಿರುವುದು ನನ್ನ ಸೌಭಾಗ್ಯ,” ಎಂದು ಸಂತಸ ಹಂಚಿಕೊಂಡಿದ್ದಾರೆ.
ಪ್ರೋಕ್ಯಾಮ್ ಇಂಟರ್ನ್ಯಾಷನಲ್ನ ವಿವೇಕ್ ಸಿಂಗ್ ಅವರು ಮಾತನಾಡಿ, “ಡಿ ಗ್ರಾಸ್ ಅವರ ಉಪಸ್ಥಿತಿಯು ಭಾರತದ ಓಟಗಾರರಲ್ಲಿ ಹೊಸ ಚೈತನ್ಯ ತುಂಬಲಿದೆ. ಅವರ ಯಶೋಗಾಥೆ ಪ್ರತಿಯೊಬ್ಬರಿಗೂ ತಮ್ಮ ಮಿತಿಗಳನ್ನು ಮೀರಿ ಬೆಳೆಯಲು ಪ್ರೇರಣೆ ನೀಡುತ್ತದೆ,” ಎಂದು ಆಶಯ ವ್ಯಕ್ತಪಡಿಸಿದ್ದಾರೆ.

