ಹೊಸದಿಗಂತ ಡಿಜಿಟಲ್ ಡೆಸ್ಕ್:
ವೈದ್ಯಕೀಯ ಲೋಕದಲ್ಲಿ ವಿಚಿತ್ರ ಮತ್ತು ವಿಭಿನ್ನವಾದ ಘಟನೆಗಳು ಸುದ್ದಿಯಾಗುತ್ತಿರುತ್ತವೆ. ಹೀಗೆ ಪ್ರಪಂಚದ ಅತಿ ದೊಡ್ಡ ಕಿಡ್ನಿ ಸ್ಟೋನ್ ಹೊರತೆಗೆಯುವ ಮೂಲಕ ಶ್ರೀಲಂಕಾ ಸೇನಾ ವೈದ್ಯರು ಗಿನ್ನೆಸ್ ವಿಶ್ವ ದಾಖಲೆ ಮಾಡಿದ್ದಾರೆ.
ಕೊಲಂಬೋದ ಸೇನಾ ಆಸ್ಪತ್ರೆಯಲ್ಲಿ ಕಿಡ್ನಿ ಸ್ಟೋನ್ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈ ಮೂಲಕ 13 ಸೆ.ಮೀ ಗಾತ್ರದ ಕಿಡ್ನಿ ಸ್ಟೋನ್ ಅನ್ನು ವೈದ್ಯರು ಹೊರತೆಗೆದಿದ್ದಾರೆ. ಪ್ರಪಂಚದಲ್ಲಿ ಈವರೆಗೆ ಓರ್ವ ವ್ಯಕ್ತಿಯ ಮೂತ್ರಪಿಂಡದಿಂದ ಹೊರತೆಗೆಯಲಾದ ಅತಿ ದೊಡ್ಡ ಕಿಡ್ನಿ ಸ್ಟೋನ್ ಇದಾಗಿದೆ. ಜೂನ್ 1 ರಂದು ಕೊಲಂಬೋ ಆರ್ಮಿ ಆಸ್ಪತ್ರೆಯಲ್ಲಿ ಪ್ರಮುಖ ಶಸ್ತ್ರಚಿಕಿತ್ಸೆಯ ಮೂಲಕ ವಿಶ್ವದ ಅತಿದೊಡ್ಡ ಮತ್ತು ಭಾರವಾದ ಮೂತ್ರಪಿಂಡದ ಕಲ್ಲನ್ನು ತೆಗೆದುಹಾಕಲಾಗಿದೆ.
ಸುಮಾರು 801 ಗ್ರಾಂ ತೂಕವಿರುವ 13.372 ಸೆ.ಮೀ (5.264 ಇಂಚು) ಉದ್ದವಿರುವ ಕಿಡ್ನಿ ಸ್ಟೋನ್ ಹೊರತೆಗೆಯಲಾಗಿದೆ. ಈ ಮೂಲಕ 2004ರಲ್ಲಿ ಭಾರತದ ವೈದ್ಯರು ವ್ಯಕ್ತಿಯೊಬ್ಬರ ದೇಹದಿಂದ ಹೊರತೆಗೆದಿದ್ದ ಕಿಡ್ನಿ ಸ್ಟೋನ್‌ನ ತೂಕದ ದಾಖಲೆಯನ್ನು (13 ಸೆಮೀ ಉದ್ದ) ಅಳಿಸಿ ಹಾಕಿದೆ.
2008 ರಲ್ಲಿ ಪಾಕಿಸ್ತಾನದ ರೋಗಿಯೊಬ್ಬರಲ್ಲಿ 620 ಗ್ರಾಂಗಳಷ್ಟು ತೂಕದ ಮೂತ್ರಪಿಂಡ ಕಲ್ಲು ಪತ್ತೆಯಾಗಿತ್ತು. ಇದು ಸಹ ಗಿನ್ನೆಸ್ ದಾಖಲೆ ಪುಟಕ್ಕೆ ಸೇರಿತ್ತು.