ನ.28-ಡಿ.3: ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಮನ್ಮಹಾಭಾರತ ಪ್ರವಚನ ಮಂಗಲೋತ್ಸವ

ಹೊಸದಿಗಂತ ವರದಿ ಮಂಗಳೂರು:

ಶ್ರೀ ಮನ್ಮಹಾಭಾರತ ಪ್ರವಚನ ಮಂಗಲೋತ್ಸವ ಸಮಿತಿ ಕಾವೂರು ಇದರ ಆಶ್ರಯದಲ್ಲಿ, ಕಾವೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನ.28 ರಿಂದ ಡಿ.3ರ ವರೆಗೆ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರಿಂದ ಶ್ರೀ ಮನ್ಮಹಾಭಾರತ ಪ್ರವಚನ ಮಂಗಲೋತ್ಸವವು ಶ್ರೀ ವಿಷ್ಣು ಸಹಸ್ರನಾಮ, ಯಾಗ ಮತ್ತಿತರ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಶ್ರೀ ಮನ್ಮಹಾಭಾರತ ಪ್ರವಚನ ಮಂಗಲೋತ್ಸವ ಸಮಿತಿಯ ಅಧ್ಯಕ್ಷ ಕೆ.ಶ್ರೀನಿವಾಸ ಭಟ್, ನ.28ರ ಸಂಜೆ 4ರಿಂದ ಕಾವೂರು ವೃತ್ತದಿಂದ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದವರೆಗೆ ಬೃಹತ್ ಶೋಭಾಯಾತ್ರೆ ನಡೆಯಲಿದೆ. ‘ಮಹಾಭಾರತ’ ಮಹಾನ್ ಕೃತಿಯನ್ನು ಅಲಂಕೃತ ಪಲ್ಲಕಿಯಲ್ಲಿ ಇಟ್ಟು ಮೆರವಣಿಗೆ ಮೂಲಕ ತರಲಾಗುವುದು. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಪಾಲ್ಗೊಳ್ಳಬೇಕು ಎಂದರು.

ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 2005ರಲ್ಲಿ ಆರಂಭಗೊಂಡ ಈ ಪ್ರವಚನ ಮಾಲಿಕೆ ಪ್ರತಿ ಸೋಮವಾರ ಸಂಜೆ ನಡೆಯುತ್ತಿತ್ತು. ಇದೀಗ 18 ವರ್ಷಗಳನ್ನು ಪೂರ್ಣಗೊಳಿಸಿದ್ದು, ಈ ಹಿನ್ನೆಲೆಯಲ್ಲಿ ಮಂಗಲೋತ್ಸವ ಆಯೋಜಿಸಲಾಗಿದೆ. ಇದೊಂದು ಅದ್ಭುತ ಪರಿಕಲ್ಪನೆಯಾಗಿದೆ. ಜೀವನ ಮೌಲ್ಯವನ್ನು ಮಹಾಭಾರತ ಪ್ರವಚನಗಳ ಮೂಲಕ ತಿಳಿಸಿಕೊಡುವ ಕಾರ್ಯ ನಿರಂತರವಾಗಿ ನಡೆದಿದೆ ಎಂದು ಹೇಳಿದರು.

ನ.28ರ ಸಂಜೆ 5:30ಕ್ಕೆ ಜ್ಞಾನ ಸತ್ರದ ಉದ್ಘಾಟನೆ ಮತ್ತು ಸಭಾ ಕಾರ್ಯಕ್ರಮ ಜರಗಲಿದೆ. ಉಡುಪಿ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದು, ಬ್ರಹ್ಮಶ್ರೀ ನರಸಿಂಹ ತಂತ್ರಿ ಕುಡುಪು ಇವರು ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಶ್ರೀನಿವಾಸ ಭಟ್ ವಿವರಿಸಿದರು.

ನ.28 ರಿಂದ ಡಿ.3ರ ವರೆಗೆ ಪ್ರತಿ ದಿನ ಸಂಜೆ ಸಭಾ ಕಾರ್ಯಕ್ರಮ, ಮಹಾಭಾರತದ ಕುರಿತ ಪ್ರವಚನವನ್ನು ಸಂಪನ್ಮೂಲ ವ್ಯಕ್ತಿಗಳು ನಡೆಸಿಕೊಡಲಿದ್ದಾರೆ ಎಂದವರು ತಿಳಿಸಿದರು.

ಡಿ.3ರಂದು ಸಂಜೆ 5ಕ್ಕೆ ಸಮಾರೋಪ-ಸನ್ಮಾನ

ಡಿ.3ರಂದು ಸಂಜೆ 5ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣ ಅವರು ಅಧ್ಯಕ್ಷತೆ ವಹಿಸುವರು. ಈ ಸಂದರ್ಭ ಕಳೆದ 18 ವರ್ಷಗಳಿಂದ ಪ್ರತಿ ಸೋಮವಾರ ಸಂಜೆ ಶ್ರೀ ಮನ್ಮಹಾಭಾರತ ಪ್ರವಚನ ನಡೆಸಿಕೊಟ್ಟ ಶ್ರೀ ಲಕ್ಷ್ಮೀಶ ಆಚಾರ್ಯ ಅವರಿಗೆ ಸನ್ಮಾನ ನೆರವೇರಲಿದೆ ಎಂದು ಶ್ರೀನಿವಾಸ ಭಟ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶ್ರೀ ಮನ್ಮಹಾಭಾರತ ಪ್ರವಚನ ಮಂಗಲೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮಾನಂದ ಭಂಡಾರಿ, ಪ್ರಧಾನ ಸಲಹೆಗಾರ ಪಿ.ಎಸ್.ಪ್ರಕಾಶ್, ಜೊತೆ ಕಾರ್ಯದರ್ಶಿ ಸುಮಂತ್ ರಾವ್ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!