ಮತ್ತೆ ನಿಮ್ಮ ಮನೆಗೆ ಬರುತ್ತಿದ್ದಾರೆ ಶ್ರೀರಾಮ: ಡಿಡಿಯಲ್ಲಿ ಪ್ರಸಾರವಾಗಲಿದೆ ‘ರಾಮಾಯಣ’!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ರಾಮಾಯಣ ಹಾಗೂ ಮಹಾಭಾರತ ಧಾರಾವಾಹಿ ಕುರಿತು ಯಾರಿಗೆ ತಿಳಿದಿಲ್ಲ ಹೇಳಿ… ಸದಾ ಜನಮಾನಸದಲ್ಲಿ ಇಂದಿಗೂ ಉಳಿದುಕೊಂಡಿರುವುದು ಈ ಧಾರಾವಾಹಿಯಾಗಿದೆ.

ರಮಾನಂದ್‌ ಸಾಗರ್‌ ಅವರ ನಿರ್ದೇಶನದ ರಾಮಾಯಣ. ಅರುಣ್‌ ಗೋವಿಲ್‌, ದೀಪಿಕಾ ಚಿಕಾಲಿಯಾ ಹಾಗೂ ಸುನೀಲ್‌ ಲೆಹ್ರಿ ಅವರ ರಾಮ, ಸೀತೆ ಹಾಗೂ ಲಕ್ಷ್ಮಣ ಪಾತ್ರ ಸದಾ ಮನಸ್ಸಿಗೆ ಹತ್ತಿರ.

ಅವರ ನಟನೆ ಎಷ್ಟರ ಮಟ್ಟಿಗೆ ಜನರಿಗೆ ತಲುಪಿದೆ ಎಂದರೆ ಇತ್ತೀಚೆಗೆ ಐತಿಹಾಸಿಕ ಅಯೋಧ್ಯಾ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೂ ಈ ಮೂವರಿಗೆ ಟ್ರಸ್ಟ್‌ ಅಧಿಕೃತ ಆಹ್ವಾನ ನೀಡಿತ್ತು.ಜೊತೆಗೆ ಅವರ ನೋಡಿದ ಕ್ಷಣ ಜನರಲ್ಲಿ ಭಕ್ತಿ ಭಾವ ಮೂಡಿತ್ತು.

ಇದೀಗ ದೇಶದಲ್ಲಿ ಶ್ರೀರಾಮನ ಬಗ್ಗೆ ಜನರು ಸ್ಮರಣೆ ಮಾಡುವ ಈ ಅಮೋಘ ಕ್ಷಣದ ಸಮಯದಲ್ಲಿ ಸರ್ಕಾರಿ ಟಿವಿ ದೂರದರ್ಶನ, ಮತ್ತೊಮ್ಮೆ ರಮಾನಂದ್‌ ಸಾಗರ್‌ ಅವರ ರಾಮಾಯಣ ಪ್ರಸಾರ ಮಾಡುವುದಾಗಿ ತಿಳಿಸಿದೆ.

1987ರಲ್ಲಿ ಪ್ರಸಾರ ಆರಂಭಿಸಿದ್ದ ರಮಾನಂದ ಸಾಗರ್‌ ಅವರ ರಾಮಾಯಣ, ಪ್ರಸಾರ ಆರಂಭಿಸಿದ ಕೆಲವೇ ಹೊತ್ತಿನಲ್ಲಿ ದೇಶಾದ್ಯಂತ ಪ್ರಸಿದ್ಧವಾಗಿತ್ತು. ಆ ನಂತರ ತ್ರೇತಾಯುಗಕ್ಕೆ ಸಂಬಂಧ ಪಟ್ಟ ಈ ಕಥೆಯನ್ನು ಮೂಲವಾಗಿಟ್ಟುಕೊಂಡ ಹಲವಾರು ಕಾರ್ಯಕ್ರಮಗಳು ಬಂದರೂ, ಯಾವುದೂ ಕೂಡ ರಮಾನಂದ ಸಾಗರ್‌ ಅವರ ರಾಮಾಯಣದಷ್ಟು ಪ್ರಸಿದ್ಧಿ ಹಾಗೂ ಪ್ರಖ್ಯಾತಿಯನ್ನು ಪಡೆದುಕೊಂಡಿರಲಿಲ್ಲ. ಪ್ರೇಕ್ಷಕರು ಕೂಡ ಅದೆಷ್ಟು ಬಾರಿ ರಾಮಾಯಣವನ್ನು ಪ್ರಸಾರ ಮಾಡಿದರೂ ನೋಡುವ ಉತ್ಸಾಹವನ್ನು ತೋರಿಸಿದ್ದಾರೆ. ಇದರ ನಡುವೆ ದೂರದರ್ಶನ ಮತ್ತೊಂದು ಸಿಹಿ ಸುದ್ದಿಯನ್ನು ನೀಡಿದೆ. ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಯ ಬಳಿಕ ಭಾರತದ ಪ್ರೇಕ್ಷಕರು ಮತ್ತೊಮ್ಮೆ ಈ ಪೌರಾಣಿಕ ದೃಶ್ಯಕಾವ್ಯವನ್ನು ಟಿವಿಯಲ್ಲಿ ನೋಡಲು ಉತ್ಸುಕರಾಗಿದ್ದಾರೆ.

ದೂರದರ್ಶನ ಈ ಕುರಿತಾಗಿ ತನ್ನ ಟ್ವಿಟರ್‌ನಲ್ಲಿ ಮಾಹಿತಿ ನೀಡಿದೆ. ಕಿರುತೆರೆಯಲ್ಲಿ ರಾಮಾಯಣ ಮತ್ತೊಮ್ಮೆ ಮರಳಲಿದೆ ಎಂದು ತಿಳಿಸಿದೆ. ‘ಧರ್ಮ, ಪ್ರೀತಿ, ಮತ್ತು ಸಮರ್ಪಣಾ ಭಾವದ ಅನನ್ಯ ಸಾಹಸಗಾಥೆ… ಮತ್ತೊಮ್ಮೆ ಇಡೀ ಭಾರತದ ಅತ್ಯಂತ ಜನಪ್ರಿಯ ಕಾರ್ಯಕ್ರಮ ‘ರಾಮಾಯಣ’ ಬರಲಿದೆ, ಶೀಘ್ರದಲ್ಲೇ ಡಿಡಿ ನ್ಯಾಷನಲ್‌ನಲ್ಲಿ ವೀಕ್ಷಿಸಿ,’ ಎಂದು ಟ್ವೀಟ್ ಮಾಡಿದೆ. ಆದರೆ, ಕಾರ್ಯಕ್ರಮದ ಪ್ರಸಾರದ ದಿನಾಂಕವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.

ಅಧಿಕೃತ ಪೋಸ್ಟ್‌ ಬಂದ ಬೆನ್ನಲ್ಲಿಯೇ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಹೆಚ್ಚಿನವರು ಕಾಮೆಂಟ್‌ ಸೆಕ್ಷನ್‌ನಲ್ಲಿ ಜೈ ಶ್ರೀರಾಮ್‌ ಎಂದು ಬರೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

LEAVE A REPLY

Please enter your comment!
Please enter your name here

error: Content is protected !!