ವಿಶ್ವ ಸಂಸ್ಥೆಯಲ್ಲಿ ಹೊಸ ದಾಖಲೆ ಸೃಷ್ಟಿಸಿದ ಶ್ರೀ ರವಿಶಂಕರ್ ಗುರೂಜಿ ವಿಶ್ವ ಧ್ಯಾನ ಕಾರ್ಯಕ್ರಮ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ವಿಶ್ವ ಧ್ಯಾನ ದಿನದ ಹಿನ್ನೆಲೆಯಲ್ಲಿ ವಿಶ್ವ ಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಆಧ್ಯಾತ್ಮಿಕ ಗುರು ಶ್ರೀ ರವಿಶಂಕರ್‌ ಗುರೂಜಿ ಅವರು ಮುಖ್ಯ ಭಾಷಣವನ್ನು ಮಾಡಿದರು ಈ ಕಾರ್ಯಕ್ರಮ ಎಲ್ಲಾ ದಾಖಲೆಗಳನ್ನೂ ಮುರಿದು ಐತಿಹಾಸಿಕ ಮೈಲಿಗಲ್ಲನ್ನು ಸೃಷ್ಟಿಸಿದೆ.

ವಿಶ್ವ ಸಂಸ್ಥೆಯ ಮುಖ್ಯ ಕಚೇರಿಯಲ್ಲಿ ನಡೆದ ಮೊದಲ ವಿಶ್ವ ಧ್ಯಾನದ ದಿನದ ಆಚರಣೆ ವಿಶ್ವದ ಅತಿ ದೊಡ್ಡ ಏಕಸಮಯದ ಸಾಮೂಹಿಕ ಧ್ಯಾನದ ದಾಖಲೆಯನ್ನು ಸೃಷ್ಟಿಸಿದೆ. ಈ ಕಾರ್ಯಕ್ರಮ ಗಿನ್ನಿಸ್ ವಿಶ್ವದಾಖಲೆಯ ಪುಸ್ತಕದಲ್ಲಿ ದಾಖಲಾಗಿದೆ. ಇದರ ಜೊತೆಗೆ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ವರ್ಲ್ಡ್ ರೆಕಾರ್ಡ್ಸ್ ಯೂನಿಯನ್ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ.

ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಆಯೋಜಿಸಿದ್ದ ಈ ಐತಿಹಾಸಿಕ ಸಮಾವೇಶದಲ್ಲಿ ಲಕ್ಷಾಂತರ ಜನರು ಜಾಗತಿಕವಾಗಿ ಒಂದಾಗಿ ಸೇರಿ, ಸಾಮೂಹಿಕ ಧ್ಯಾನದ ವಿಶ್ವದಾಖಲೆಯನ್ನು ಸೃಷ್ಟಿಸಿದರು.

ಮೊಟ್ಟ ಮೊದಲ ವಿಶ್ವ ಧ್ಯಾನ ದಿನವು ಐಕ್ಯತೆಯ ಹಾಗೂ ಆಂತರಿಕ ಶಾಂತಿಯ, ಸರಿಸಾಟಿಯಿಲ್ಲದಂತಹ ಉತ್ಸವವಾಗಿ ಆಚರಿಸಲ್ಪಟ್ಟಿತು. 180 ದೇಶಗಳ ಜನರು ಭಾಗವಹಿಸಿ, ಧ್ಯಾನವು ಪರಿವರ್ತಕ ಶಕ್ತಿಯನ್ನು ಹೊಂದಿರುವಂತಹ ಜಾಗತಿಕ ಚಳುವಳಿ ಎಂದು ತೋರಿಸಿದರು. ವಿಶ್ವ ಸಂಸ್ಥೆಯಲ್ಲಿ ಉದ್ಘಾಟನಾ ಸಮಾರಂಭದಿಂದ ಪ್ರಾರಂಭವಾಗಿ, ವರ್ಲ್ಡ್ ಟ್ರೇಡ್ ಸೆಂಟರ್‌ನ ಮೇಲಿನಿಂದ ರವಿಶಂಕರ್ ಗುರೂಜಿ ಅವರ ಧ್ಯಾನದ ನೇರ ಪ್ರಸಾರದೊಂದಿಗೆ ಈ ಸಮಾರಂಭವು ಮುಕ್ತಾಯಗೊಂಡಿತು.

ಶ್ರೀ ರವಿಶಂಕರ್ ಗುರೂಜಿ ನಡೆಸಿಕೊಟ್ಟ ಧ್ಯಾನದ ನೇರಪ್ರಸಾರದಲ್ಲಿ ಲಕ್ಷಾಂತರ ಜನರು ಅಂತರ್ಜಾಲದ ಮೂಲಕ ಭಾಗವಹಿಸಿ, ವಿಶ್ವ ಶಾಂತಿ ಮತ್ತು ಸಾಮರಸ್ಯಕ್ಕಾಗಿ ಧ್ಯಾನ ಮಾಡಿದರು. ಧ್ಯಾನವನ್ನು ಆರಂಭಿಸುವ ಮೊದಲು, ಧ್ಯಾನದ ಅರ್ಥವನ್ನು ರವಿಶಂಕರ್‌ ಗುರೂಜಿ ಅವರು ವಿವರಿಸಿದರು.

ಧ್ಯಾನವೆಂದರೆ, ಆಲೋಚನೆಗಳಲ್ಲಿ ತಿಳಿದಿರುವುದನ್ನು ಅನುಭವಿಸುವ ಪಯಣ. ಧ್ಯಾನ ಮಾಡಬೇಕಾದರೆ, ವಿಪರೀತವಾಗಿ ಆಲೋಚಿಸುವುದರಿಂದ, ಏನಿದೆಯೋ ಅದನ್ನು ಅನುಭವಿಸುವುದರತ್ತ ಹೋಗಬೇಕು. ನಂತರ ಆ ಆಲೋಚನೆಗಳನ್ನೂ ದಾಟಿ ಆಂತರ್ಯದ ಆಕಾಶದೊಳಗೆ ತೆರಳುವುದು. ವಿವೇಚನೆಯುಳ್ಳವರಾಗಿ, ಸೂಕ್ಷ್ಮತೆಯುಳ್ಳವರಾಗಿ ಇರಬೇಕೆಂದರೆ ಧ್ಯಾನವನ್ನು ಮಾಡಬೇಕು. ಧ್ಯಾನವೆಂದರೆ ನಿಷ್ಕ್ರಿಯವಾದ ಸ್ಥಿತಿಯಲ್ಲ. ಧ್ಯಾನದಿಂದ ನೀವು ಹೆಚ್ಚು ಕ್ರಿಯಾಶೀಲರಾಗುತ್ತೀರಿ ಮತ್ತು ಶಾಂತಿಯುತರಾಗುತ್ತೀರಿ. ಕ್ರಾಂತಿಕಾರಿಯಾಗಲೂ ಸಹ ಧ್ಯಾನ ಮಾಡಬೇಕು.

ಆರ್ಟ್ ಆಫ್ ಲಿವಿಂಗ್‌ನ ಈ ಕಾರ್ಯಕ್ಕೆ ಜಾಗತಿಕ ನಾಯಕರು, ಸೆಲೆಬ್ರಿಟಿಗಳು, ಕ್ರೀಡಾಪಟುಗಳು, ವೃತ್ತಿಪರರು, ಜೀವನದ ಎಲ್ಲಾ ವರ್ಗದವರು, ಎಲ್ಲಾ ವಯೋಮಾನದವರೂ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ರೈತರು, ಶಿಕ್ಷಣ ಸಂಸ್ಥೆಗಳು, ಅಂಧ ಶಾಲೆಯ ಮಕ್ಕಳು, ಕಾರ್ಪೊರೇಟ್‌ಗಳು, ಮಿಲಿಟರಿಯ ಸದಸ್ಯರು, ಆರೋಗ್ಯ ಕಾರ್ಯಕರ್ತರು, ಸಂಶೋಧಕರು, ವಿಜ್ಞಾನಿಗಳು, ಗೃಹಿಣಿಯರು, ಬುಡಕಟ್ಟು ಜನಾಂಗದವರು, ಕಾರಾಗೃಹದ ಕೈದಿಗಳು ಭಾಗವಹಿಸಿ, ಧ್ಯಾನದ ವೈಶ್ವಿಕತೆಯನ್ನು, ಅದರ ಸಕಾರಾತ್ಮಕವಾದ ಸೆಳೆತವನ್ನು ತೋರಿಸಿದರು. ಶಾಂತಿ ಹಾಗೂ ಸಾಮರಸ್ಯದ ಕ್ಷಣಗಳಲ್ಲಿ ಜಗತ್ತು ಒಂದಾಯಿತು.

ಶ್ರೀ ರವಿಶಂಕರ್ ಗುರೂಜಿ ಅವರೊಂದಿಗೆ ವಿಶ್ವ ಧ್ಯಾನಕ್ಕೆ ದೊರೆತ ಅಗಾಧವಾದ ಪ್ರತಿಕ್ರಿಯೆ ಹಾಗೂ ಜಾಗತಿಕ ಭಾಗವಹಿಸುವಿಕೆಯು ಸಾಮೂಹಿಕ ಧ್ಯಾನದ ಪರಿವರ್ತಕ ಶಕ್ತಿಯನ್ನು ತೋರಿಸುತ್ತದೆ. ಈ ಅಪಾರ ಯತ್ನದಿಂದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಧ್ಯಾನದಲ್ಲಿ ಅನೇಕ ಮಿಲಿಯನ್ ಜನರನ್ನು ಒಗ್ಗೂಡಿಸಿದೆ. ಅಲ್ಲದೆ ಆಂತರಿಕ ಶಾಂತಿ ಮತ್ತು ವೈಶ್ವಿಕ ಸಾಮರಸ್ಯದ ಜಾಗತಿಕ ಚಳುವಳಿಗೂ ಸ್ಫೂರ್ತಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!