ಶ್ರೀ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯ: ಮುಗಿಲು ಮುಟ್ಟಿದ ಭಕ್ತರ ಆಕ್ರಂದನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಡೆದಾಡುವ ದೇವರು, ಜ್ಞಾನದ ನಿಧಿ, ಎರಡನೇ ವಿವೇಕಾನಂದ ಆಗಿದ್ದ ಪ್ರಖ್ಯಾತ ವಾಗ್ಮಿ, ಧಾರ್ಮಿಕ ಚಿಂತಕ, ಲೇಖಕ, ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ (82) ಅವರು ಲಿಂಗೈಕ್ಯರಾಗಿದ್ದಾರೆ.

ಈ ಸುದ್ದಿ ತಿಳಿಯುತ್ತಿದ್ದಂತೆ ಭಕ್ತರ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತ ಮಠದತ್ತ ಭಕ್ತರು ಧಾವಿಸುತ್ತಿದ್ದಾರೆ.
ಮಠದ ಸುತ್ತ ಮುತ್ತ ಹೆಚ್ಚಿನ ಭದ್ರತೆ ಒದಗಿಸಿದ್ದಾರೆ. ರಾಜ್ಯದ ಉದ್ದಗಲಕ್ಕೂ ಕಾನೂನು ಸುವ್ಯವಸ್ಥೆಯಲ್ಲಿ ಲೋಪವಾಗದಂತೆ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.

ಶ್ರೀ ಸಿದ್ದೇಶ್ವರ ಸ್ವಾಮೀಜಿ ಸರಳ, ಸುಂದರ ಅಧ್ಯಾತ್ಮಿಕ ಜೀವನದ ಮೂಲಕ ಜನಮನದ ಮೇಲೆ ಗಾಢ ಪ್ರಭಾವ ಬೀರಿದ ಅವರು ಉಪನ್ಯಾಸ, ಅಂಕಣ ಮತ್ತು ಕೃತಿಗಳ ಮೂಲಕ ಅಸಂಖ್ಯಾತ ಜನರ ಮನಸ್ಸಿಗೆ ಸಾಂತ್ವನ ನೀಡಿದವರು.

ಗದುಗಿನ ಶಿವಾನಂದ ಶ್ರೀಗಳ ಪರಂಪರೆಗೆ ಸೇರಿದ ವಿಜಯಪುರದ ಜ್ಞಾನಯೋಗಾಶ್ರಮ ಅಧ್ಯಕ್ಷರಾಗಿ ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳ ಸಾವಿರಾರು ಹಳ್ಳಿಗಳಲ್ಲಿ ಸಂಚರಿಸಿ ಜ್ಞಾನದಾಸೋಹ ನೀಡಿದವರು.

ತಮ್ಮ ಗುರುಗಳಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ಜ್ಞಾನದಾಸೋಹ ಪರಂಪರೆಯನ್ನು ವಿಸ್ತಾರಗೊಳಿಸಿದ ಶ್ರೀಗಳು, ಜ್ಞಾನಯೋಗಾಶ್ರಮವನ್ನು ನಾಡಿನ ಪ್ರಸಿದ್ಧ ಆಧ್ಯಾತ್ಮಿಕ, ಸಾಮಾಜಿಕ, ಶೈಕ್ಷಣಿಕ ತಾಣಗಳಲ್ಲಿ ಒಂದಾಗಿಸಿದವರು.

ಹಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಸಿದ್ದೇಶ್ವರ ಸ್ವಾಮೀಜಿಗಳ ಆರೋಗ್ಯ ಸುಧಾರಣೆಗೆ ಇಡೀ ನಾಡು ಪ್ರಾರ್ಥಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರೇ ಕರೆ ಮಾಡಿ ಶ್ರೀಗಳ ಆರೋಗ್ಯ ವಿಚಾರಿಸಿದ್ದರು.

ಅಷ್ಟೇ ಅಲ್ಲ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ನಾಡಿನ ಪ್ರಮುಖ ರಾಜಕಾರಣಿಗಳು, ಸ್ವಾಮೀಜಿಗಳು ಶ್ರೀಗಳ ಆರೋಗ್ಯ ವಿಚಾರಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!