ಯಡಿಯೂರಪ್ಪ ಮುಂದೆ ಮೋದಿ ಕಾರ್ಯಕ್ರಮಕ್ಕೆ ಬರುವೆ ಎಂದ ಶ್ರೀನಿವಾಸ ಪ್ರಸಾದ್ ನಡೆ ಇನ್ನೂ ನಿಗೂಢ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಎಸ್‌ ಯಡಿಯೂರಪ್ಪ ಇಂದು ಖುದ್ದಾಗಿ ಶ್ರೀನಿವಾಸ ಪ್ರಸಾದ್ ನಿವಾಸಕ್ಕೆ ತೆರಳಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅಸಮಾಧಾನ ಶಮನಗೊಳಿಸಲು ಯತ್ನಿಸಿದ್ದಾರೆ. ಇಂದು ಸಂಜೆ ಮೈಸೂರಿನಲ್ಲಿ ನಡೆಯಲಿರುವ ಮೋದಿ ಸಮಾವೇಶಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ.

ಈ ವೇಳೆ ಮೋದಿ ಕಾರ್ಯಕ್ರಮಕ್ಕೆ ಬರಲು ಪ್ರಸಾದ್ ಒಪ್ಪಿಕೊಂಡಿದ್ದಾರೆ. ನಮ್ಮ ಸಂಸತ್ ಸದಸ್ಯರು ಬಹಳ ಹಿರಿಯವರು. ಮೋದಿ ಅವರ ಬಗ್ಗೆ ಬಹಳ ಗೌರವ ಇಟ್ಟುಕೊಂಡಿರುವ ನಾಯಕರು. ನಾನು ಅವರಿಗೆ ಮನವಿ ಮಾಡಿಕೊಂಡಿದ್ದೇನೆ. ಮೋದಿ ಭೇಟಿ‌ ಮಾಡಿ ಐದು ನಿಮಿಷ ಇದ್ದು ಹೋಗಿ ಎಂದು ಕೇಳಿಕೊಂಡಿದ್ದೇನೆ. ಈಗ ಅವರು ಬರಲು ಒಪ್ಪಿಕೊಂಡಿದ್ದಾರೆ. ಇದಕ್ಕೆ ಚಿರ ಋಣಿಯಾಗಿದ್ದೇನೆ’ ಎಂದು ಬಿಎಸ್‌ವೈ ಹೇಳಿಕೆ ನೀಡಿದ್ದಾರೆ.

ಆದರೆ ಬಿಎಸ್‌ವೈ ಭೇಟಿ ಮಾಡಿ ಹೊರಹೋದ ಬಳಿಕ ಶ್ರೀನಿವಾಸ ಪ್ರಸಾದ್ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತಾಡುವ ಮೂಲಕ ಅವರ ನಡೆ ಬಗ್ಗೆ ಗುಟ್ಟುಕೊಟ್ಟಿಲ್ಲ.

ಬಿಎಸ್‌ ಯಡಿಯೂರಪ್ಪ ಭೇಟಿ ಮಾಡಿದಾಗ ಸಕರಾತ್ಮಕವಾಗಿ ಸ್ಪಂದಿಸಿರುವ ವಿ ಶ್ರೀನಿವಾಸ ಪ್ರಸಾದ್, ಯಡಿಯೂರಪ್ಪ ಭೇಟಿ ಮಾಡಿ ಹೊರಹೊಗುತ್ತಿದ್ದ ಉಲ್ಟಾ ಹೊಡೆದಿದ್ದಾರೆ.

ಮನೆ ಬಾಗಿಲಿಗೆ ಬಂದವರಿಗೆ ಅಗೌರವ ತೋರಲು ಆಗಲ್ಲ. ಪ್ರಧಾನಿ ಕಾರ್ಯಕ್ರಮಕ್ಕೆ ಯಡಿಯೂರಪ್ಪ ಆಹ್ವಾನ ನೀಡಿದ್ದಾರೆ. ಮನೆಗೆ ಬಂದವರನ್ನ ಸೌಜನ್ಯದಿಂದ ಬರಮಾಡಿಕೊಳ್ಳುವುದು ನನ್ನ ಕರ್ತವ್ಯ. ಕಡ ಖಂಡಿತವಾಗಿ ಬರಲು ಆಗಲ್ಲ ಅಂತ ಹೇಳಲು ಆಗೊಲ್ಲ.ಸೌಜನ್ಯದಿಂದ ಬಂದಾಗ ಪ್ರೀತಿಯಿಂದ ಮಾತನಾಡಿದ್ದೇನೆ. ಕಾರ್ಯಕ್ರಮಕ್ಕೆ ಹೋಗುವುದು ಬಿಡುವುದು ನಮ್ಮ ತೀರ್ಮಾನ ಎನ್ನುವ ಮೂಲಕ ತಮ್ಮ ನಡೆಯನ್ನು ಮತ್ತಷ್ಟು ಗುಟ್ಟಾಗಿಸಿದ್ದಾರೆ.

ನಿನ್ನೆಯಷ್ಟೆ ಬಹಿರಂಗವಾಗಿ ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಮೋದಿ ಸಮಾವೇಶಕ್ಕೆ ಅವರು ಆಹ್ವಾನ ಕೊಡುವುದೂ ಇಲ್ಲ, ಕೊಟ್ಟರು ನಾನು ಹೋಗುವುದಿಲ್ಲ ಎಂಬಂತಹ ಮಾತುಗಳನ್ನಾಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!