ವಿಜೃಂಣೆಯಿಂದ ನಡೆದ ಶ್ರೀರಂಗಪಟ್ಟಣ ದಸರಾ ಉತ್ಸವ!

ಹೊಸ ದಿಗಂತ ವರದಿ, ಮಂಡ್ಯ:

ದಸರಾದ ಮೂಲ ನೆಲೆಯಾದ ಪಾರಂಪರಿಕ ಹಾಗೂ ಐತಿಹಾಸಿಕ ಶ್ರೀರಂಗಪಟ್ಟಣದಲ್ಲಿ ಸೋಮವಾರ ವಿಜೃಂಣೆಯಿಂದ ನಡೆದ ನಾಡಹಬ್ಬ ದಸರಾ ಉತ್ಸವವನ್ನು ಸಹಸ್ರಾರು ಜನರು ಸಾಕ್ಷೀಕರಿಸಿದರು. ಜಂಬೂ ಸವಾರಿಯು ದಸರಾದ ಗತವೈಭವ ಸಾರಿತು. ಮೈಸೂರಿಗೂ ಮುನ್ನ ವಿಜೃಂಣೆಯಿಂದ ನಡೆದ ಶ್ರೀರಂಗಪಟ್ಟಣ ದಸರಾ ವಿಶೇಷವಾಗಿ ಎಲ್ಲರ ಗಮನ ಸೆಳೆಯಿತು.

15ನೇ ವರ್ಷದ ದಸರಾ ಮಹೋತ್ಸವಕ್ಕೆ ಪಟ್ಟಣದ ಹೊರವಲಯದ ಕಿರಂಗೂರು ಸರ್ಕಲ್‌ನಲ್ಲಿನ ದಸರಾ ಮಂಟಪದಲ್ಲಿ ಶ್ರೀಚಾಮುಂಡೇಶ್ವರಿ ಮತ್ತು ಶಮೀವೃಕ್ಷ(ಬನ್ನಿ ಮರ)ಕ್ಕೆ ಸೋಮವಾರ ಮಧ್ಯಾಹ್ನ 2.30 ರಿಂದ 3.15ರವರೆಗೆ ಸಲ್ಲುವ ಮಕರ ಲಗ್ನದಲ್ಲಿ ಪೂಜೆ ಸಲ್ಲಿಸುವ ಮೂಲಕ ದಸರಾ ಕಾರ‌್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಮಧ್ಯಾಹ್ನ 3.25 ಅಂಬಾರಿ ಹೊತ್ತ ಚಾಮುಂಡೇಶ್ವರಿ ತಾಯಿಗೆ ಮೈಸೂರಿನ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರು ಪುಷ್ಪಾಭಿಷೇಕ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಪೂಜೆ ಸಲ್ಲಿಸುವ ಸಂದರ್ಭದಲ್ಲಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ಶಾಸಕ ಎ.ಬಿ ರಮೇಶ್ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಕ್ ತನ್ವೀರ್ ಆಸಿಫ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಮೆರವಣಿಗೆಯಲ್ಲಿ ತಾಯಿ ಚಾಮುಂಡೇಶ್ವರಿ ಅಂಬಾರಿ ಹೊತ್ತು ಮಹೇಂದ್ರ ಮುಂದೆ ಸಾಗಿತು. ವರಲಕ್ಷ್ಮೀ ಹಾಗೂ ವಿಜಯ ಜೊತೆಗೆ ಹೆಜ್ಜೆ ಹಾಕಿತು. ಮೆರವಣಿಗೆಯಲ್ಲಿ ಪೊಲೀಸ್ ಬ್ಯಾಂಡ್, ಅಶ್ವದಳ, ಪೂಜಾ ಕುಣಿತ, ವೀರಗಾಸೆ, ನಗಾರಿ, ಜಡೆ ಕೋಲಾಟ, ಗಾರುಡಿ ಗೊಂಬೆ, ತಮಟೆ, ಕಂಸಾಳೆ, ಡೊಳ್ಳು ಕುಣಿತ, ಸೋಮನ ಕುಣಿತ, ಒನಕೆ ಕುಣಿತ, ರಂಗದ ಕುಣಿತ, ಕೋಳಿ ನೃತ್ಯ, ಕಹಳೆ, ನಾಸಿಕ್ ಡೋಲ್, ದೊಡ್ಡ ಆಂಜನೇಯ, ಪಟ್ಟದ ಕುಣಿತ, ಯಕ್ಷಗಾನ ನೃತ್ಯ, ಹುಲಿವೇಷ, ಹಾಲಕ್ಕಿ ಸುಗ್ಗಿ ಕುಣಿತ, ಕೇರಳ ಚಂಡೆ, ಜಗ್ಗಲಿಗೆ, ಮಹಿಳಾ ಡೊಳ್ಳು ಕುಣಿತ ಕಲಾ ತಂಡಗಳು ಭಾಗವಹಿಸಿ ವಿಶೇಷ ಮೆರಗು ನೀಡಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!