July 14, 2026
Tuesday, July 14, 2026
spot_img

SRK ‘ಮನ್ನತ್’ ನವೀಕರಣ ಕೇಸ್: ಅರ್ಜಿದಾರರ ಉದ್ದೇಶವನ್ನೇ ಪ್ರಶ್ನಿಸಿ ಕೋರ್ಟ್ ತರಾಟೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ (SRK) ಹಾಗೂ ಅವರ ಪತ್ನಿ ಗೌರಿ ಖಾನ್ ಅವರ ಮುಂಬೈನ ಐಷಾರಾಮಿ ನಿವಾಸ ‘ಮನ್ನತ್‌’ ನವೀಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮನೆಯ ರೀಮೋಡೆಲಿಂಗ್ ಪ್ರಶ್ನಿಸಿ ಮುಂಬೈ ನಿವಾಸಿಯೊಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಅರ್ಜಿಯಲ್ಲಿ ಯಾವುದೇ ಬಲವಾದ ಅಂಶಗಳಿಲ್ಲ ಎಂದು ಸುಪ್ರೀಂಕೋರ್ಟ್ ಇದನ್ನು ಸಂಪೂರ್ಣವಾಗಿ ವಜಾಗೊಳಿಸಿದೆ.

ಪರಿಸರ ನಿಯಮಗಳ ಉಲ್ಲಂಘನೆ ಆರೋಪ

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಶೋಯೇಬ್ ಆಲಂ, ಮನ್ನತ್ ನಿವಾಸದ ನವೀಕರಣ ಪ್ರಕ್ರಿಯೆಯಲ್ಲಿ ಪರಿಸರ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಆರೋಪಿಸಿದ್ದರು. 5 ಕೋಟಿ ರೂಪಾಯಿಗಿಂತ ಹೆಚ್ಚಿನ ವೆಚ್ಚದ ಯೋಜನೆ ಇದಾಗಿದ್ದರಿಂದ, ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಪೂರ್ವಾನುಮತಿ ಅಗತ್ಯವಾಗಿತ್ತು. ಆದರೆ ಇಲ್ಲಿ ಯಾವುದೇ ಶಾಸನಬದ್ಧ ಅನುಮೋದನೆ ಪಡೆದಿಲ್ಲ ಎಂದು ವಾದಿಸಿದರು.

ಅರ್ಜಿದಾರರ ಉದ್ದೇಶ ಪ್ರಶ್ನಿಸಿದ ಸುಪ್ರೀಂ

ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರಿದ್ದ ಪೀಠವು, ಅರ್ಜಿದಾರರ ನೈಜ ಉದ್ದೇಶವನ್ನು ತೀವ್ರವಾಗಿ ಪ್ರಶ್ನಿಸಿತು. ‘ಮನ್ನತ್’ ಒಂದು ಖಾಸಗಿ ಸ್ವತ್ತಾಗಿದ್ದು, ಅಲ್ಲಿನ ಮಾಲೀಕರು ಕಾನೂನು ಚೌಕಟ್ಟಿನೊಳಗೆ ತಮ್ಮ ನಿವಾಸವನ್ನು ನವೀಕರಿಸುವ ಪೂರ್ಣ ಹಕ್ಕನ್ನು ಹೊಂದಿದ್ದಾರೆ ಎಂದು ಕೋರ್ಟ್ ಸ್ಪಷ್ಟಪಡಿಸಿತು.

ಹಸಿರು ನ್ಯಾಯಾಧೀಕರಣಕ್ಕೂ ಇಲ್ಲ ಅವಕಾಶ

ಪ್ರಕರಣವನ್ನು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣಕ್ಕೆ (NGT) ಮರುಪರಿಶೀಲನೆಗಾಗಿ ವರ್ಗಾಯಿಸಬೇಕು ಎಂಬ ಅರ್ಜಿದಾರರ ಮನವಿಯನ್ನೂ ಸುಪ್ರೀಂಕೋರ್ಟ್ ತಿರಸ್ಕರಿಸಿತು. ಅಂತಿಮವಾಗಿ, ನ್ಯಾಯಾಲಯವು ಯಾವುದೇ ವ್ಯಕ್ತಿಯ ಜನಪ್ರಿಯತೆ ಅಥವಾ ಸೆಲೆಬ್ರಿಟಿ ಸ್ಥಾನಮಾನವನ್ನು ನೋಡಿ ತೀರ್ಪು ನೀಡುವುದಿಲ್ಲ, ಕೇವಲ ಕಾನೂನಿನ ಆಧಾರದ ಮೇಲೆ ನಿರ್ಧಾರ ಕೈಗೊಳ್ಳುತ್ತದೆ ಎಂದು ಹೇಳಿ ಪ್ರಕರಣಕ್ಕೆ ಪೂರ್ಣವಿರಾಮ ಇಟ್ಟಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !