ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾ ಕೊನೆಗೂ ವರ್ಲ್ಡ್ ವೈಡ್ ಅಬ್ಬರಿಸಲು ಸಜ್ಜಾಗಿದೆ. ಎರಡು ಬಾರಿ ಬಿಡುಗಡೆ ಮುಂದೂಡಲ್ಪಟ್ಟಿದ್ದ ಈ ಚಿತ್ರದ ರಿಲೀಸ್ ಡೇಟ್ ಕೊನೆಗೂ ಫಿಕ್ಸ್ ಆಗಿದ್ದು, ಜಾಗತಿಕ ಮಟ್ಟದಲ್ಲಿ ಭರ್ಜರಿ ಹವಾ ಸೃಷ್ಟಿಸುತ್ತಿದೆ. ಚಿತ್ರದ ಆನ್‌ಲೈನ್ ಪ್ರಚಾರ ಈಗಾಗಲೇ ಬಿರುಸಿನಿಂದ ಸಾಗುತ್ತಿದ್ದು, ಟೀಸರ್ ಮತ್ತು ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸುತ್ತಿವೆ.
ಮುಂಬೈನಿಂದ ಆರಂಭವಾಗಲಿದೆ ಆಫ್‌ಲೈನ್ ಅಬ್ಬರ
ಡಿಜಿಟಲ್ ಕ್ರಾಂತಿಯ ಬೆನ್ನಲ್ಲೇ ಯಶ್ ಈಗ ಖುದ್ದು ಆಫ್‌ಲೈನ್ ಪ್ರಚಾರಕ್ಕೆ ಮೈದಾನಕ್ಕಿಳಿದಿದ್ದಾರೆ. ‘ಕೆಜಿಎಫ್’ ಮಾದರಿಯಲ್ಲೇ ದೇಶದ ಪ್ರಮುಖ ಮಹಾನಗರಗಳಲ್ಲಿ ಅದ್ಧೂರಿ ಪ್ರೀ-ರಿಲೀಸ್ ಕಾರ್ಯಕ್ರಮಗಳನ್ನು ನಡೆಸಲು ಮಾಸ್ಟರ್ ಪ್ಲಾನ್ ಮಾಡಲಾಗಿದೆ. ಈ ಪ್ರಚಾರದ ಅಲೆ ದೇಶದ ವಾಣಿಜ್ಯ ನಗರಿ ಮುಂಬೈನಿಂದ ಆರಂಭವಾಗಿ, ಅಂತಿಮವಾಗಿ ನಮ್ಮ ಹೆಮ್ಮೆಯ ಕರ್ನಾಟಕದಲ್ಲಿ ಮುಕ್ತಾಯಗೊಳ್ಳಲಿದೆ.
ಅಮೆರಿಕದಲ್ಲಿ ಯಶ್ ಗ್ಲೋಬಲ್ ರೈಡ್
‘ಟಾಕ್ಸಿಕ್’ ಚಿತ್ರವನ್ನು ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲಕ್ಕೆ ಅದ್ಧೂರಿಯಾಗಿ ನಿರ್ಮಿಸಲಾಗಿದೆ. ಇತ್ತೀಚೆಗೆ ಪ್ರತಿಷ್ಠಿತ ‘ಕಾಮಿಕ್ ಕಾನ್’ನಲ್ಲಿ ಚಿತ್ರದ ಝಲಕ್ ಪ್ರದರ್ಶಿಸಲಾಗಿದ್ದು, ಅಂತರರಾಷ್ಟ್ರೀಯ ವಿತರಕರು ಫಿದಾ ಆಗಿದ್ದಾರೆ. ಹೀಗಾಗಿ, ಚಿತ್ರವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಯಶ್ ಅಮೆರಿಕ ಸೇರಿದಂತೆ ಹಲವು ವಿದೇಶಗಳಿಗೆ ಪ್ರವಾಸ ಕೈಗೊಂಡು ಅಲ್ಲಿನ ಸ್ಥಳೀಯ ಮಾಧ್ಯಮಗಳಿಗೆ ವಿಶೇಷ ಸಂದರ್ಶನ ನೀಡಲಿದ್ದಾರೆ.
ಬೆಂಗಳೂರಿನಲ್ಲಿ ಗ್ರ್ಯಾಂಡ್ ಪ್ರೀ-ರಿಲೀಸ್ ಇವೆಂಟ್
ಸಿನಿಮಾ ಬಿಡುಗಡೆಗೆ ಕೇವಲ ಒಂದು ವಾರ ಬಾಕಿ ಇರುವಾಗ ಬೆಂಗಳೂರು ಅಥವಾ ಅದರ ಸುತ್ತಮುತ್ತಲಿನ ನಗರದಲ್ಲಿ ಭಾರತೀಯ ಚಿತ್ರರಂಗವೇ ಬೆರಗಾಗುವಂತಹ ಬೃಹತ್ ಪ್ರೀ-ರಿಲೀಸ್ ಕಾರ್ಯಕ್ರಮ ಆಯೋಜನೆಯಾಗಲಿದೆ. ಈ ಸಮಾರಂಭದಲ್ಲಿ ಚಿತ್ರದ ಎಲ್ಲಾ ತಾರಾಗಣ ಹಾಗೂ ತಾಂತ್ರಿಕ ವರ್ಗ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದು, ಅಭಿಮಾನಿಗಳಿಗೆ ಹಬ್ಬದೂಟ ಸಿಗಲಿದೆ.



