ಡಿಸಿಸಿ ಬ್ಯಾಂಕ್ ಗಳಿಗೆ ಬಡ್ಡಿ ಸಹಾಯಧನ ಶೀಘ್ರವೇ ಬಿಡುಗಡೆ: ಸಹಕಾರಿ ಸಚಿವ ಸೋಮಶೇಖರ್


ಹೊಸದಿಗಂತ ವರದಿ, ಮಡಿಕೇರಿ:
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್’ಗಳಿಗೆ ಬಡ್ಡಿ ಸಹಾಯಧನ ಬಿಡುಗಡೆ ನಿರಂತರ ಪ್ರಕ್ರಿಯೆಯಾಗಿದ್ದು, ಕಾಲಕಾಲಕ್ಕೆ ಬಾಕಿ ಬಿಡುಗಡೆ ಮಾಡಲಾಗುತ್ತಿದೆ. ಈ ಬ್ಯಾಂಕುಗಳಿಗೆ ಬಾಕಿ ಉಳಿಸಿಕೊಂಡಿರುವ ಮೊತ್ತವನ್ನು ಪ್ರಸಕ್ತ ಸಾಲಿನ ಮೊದಲನೇ ತ್ರೈಮಾಸಿಕದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸಹಕಾರ ಸಚಿವ ಎಸ್ ಟಿ. ಸೋಮಶೇಖರ್ ಮಾಹಿತಿ ನೀಡಿದ್ದಾರೆ.
ವಿಧಾನ ಪರಿಷತ್’ನಲ್ಲಿ ಸದಸ್ಯೆ ವೀಣಾ ಅಚ್ಚಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕೊಡಗು ಜಿಲ್ಲೆಯ ಸಹಕಾರ ಸಂಘಗಳಿಗೆ ಸರ್ಕಾರದಿಂದ ಬಾಕಿ ಇರುವ ಕೃಷಿ ಸಾಲಗಳ ಮೇಲಿನ ಬಡ್ಡಿ ಸಹಾಯಧನ ಇನ್ನೂ ಬಿಡುಗಡೆ ಆಗಿಲ್ಲ, ಆದರೆ ಇದರಿಂದ ಜಿಲ್ಲೆಯಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ವ್ಯವಹಾರ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ರೀತಿಯ ಸಮಸ್ಯೆ ಎದುರಾಗಿಲ್ಲ ಎಂದು ಹೇಳಿದರು.
ಕೃಷಿ ಸಾಲಗಳ ಮೇಲಿನ ಬಡ್ಡಿ ಸಹಾಯಧನ ಯೋಜನೆಯಲ್ಲಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಡಿಸಿಸಿ), ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪ್ಯಾಕ್ಸ್)ಗಳಲ್ಲಿ ರೈತರು ಪಾವತಿಸಿದ ಅಸಲನ್ನು ಜಮಾ ಮಾಡಿಕೊಳ್ಳಲಾಗುತ್ತದೆ. ಈ ಮೊತ್ತಕ್ಕೆ ನಂತರ ಈ ಮೊತ್ತಕ್ಕೆ ಸರ್ಕಾರದಿಂದ ಬಿಡುಗಡೆಯಾಗುವ ಬಡ್ಡಿ ಸಹಾಯಧನವನ್ನು ಜಮಾ ಮಾಡಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿಗಳಿಗೆ ಸಮಸ್ಯೆ ಎದುರಾಗುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಕೃಷಿ ಸಾಲಗಳ ಬಡ್ಡಿ ಸಹಾಯಧನ ಯೋಜನೆಯಡಿ 2021-22 ನೇ ಸಾಲಿನ ಜನವರಿ ಅಂತ್ಯದವರೆಗೆ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ 20.31 ಕೋಟಿ ರು, ಬಡ್ಡಿ ಸಹಾಯಧನ ಬಿಡುಗಡೆಗೆ ಮಾಡಿದ್ದು, ಇದರಲ್ಲಿ ರೂ.8.02 ಕೋಟಿಗಳನ್ನು ಪ್ಯಾಕ್ಸ್ ಮಾರ್ಜಿನ್ ಮೊತ್ತವಾಗಿ ಡಿಸಿಸಿ ಬ್ಯಾಂಕಿನಿಂದ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಬಾಕಿ ಉಳಿದ ರೂ.28.62 ಕೋಟಿಗಳಲ್ಲಿ ಮಾ.5ರಂದು 25.92 ಕೋಟಿ ರೂ.ಗಳನ್ನು ಡಿಸಿಸಿ ಬ್ಯಾಂಕಿಗೆ ಬಿಡುಗಡೆ ಮಾಡಿದ್ದು, ಎರಡು ದಿನದೊಳಗಾಗಿ ಪ್ಯಾಕ್ಸ್ ಮಾರ್ಜಿನ್ ಮೊತ್ತವನ್ನು ಡಿಸಿಸಿ ಬ್ಯಾಂಕಿನಿಂದ ಬಿಡುಗಡೆ ಮಾಡಲಾಗುವುದು. ಪ್ರಸಕ್ತ ರೂ.2.70 ಕೋಟಿಗಳು ಮಾತ್ರ ಡಿಸಿಸಿ ಬ್ಯಾಂಕಿಗೆ ಬಿಡುಗಡೆಗೆ ಬಾಕಿ ಉಳಿದಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ವಿವರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!