ಐಪಿಎಲ್ 17ನೇ ಆವೃತ್ತಿ ಆರಂಭಕ್ಕೆ ವೇದಿಕೆ ಸಜ್ಜು: ಹೊಸ ಅಪ್‌ಡೇಟ್ ಕೊಟ್ಟ ಚೇರ್‌ಮನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಆವೃತ್ತಿಗೆ ಸಜ್ಜಾಗಿದ್ದು, ಈಗಾಗಲೇಆಟಗಾರರ ಹರಾಜು ಕೂಡಾ ಮುಕ್ತಾಯವಾಗಿದ್ದು, ಎಲ್ಲಾ 10 ಫ್ರಾಂಚೈಸಿಗಳು ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಕಪ್ ಗೆಲ್ಲಲು ರಣತಂತ್ರ ಹೆಣೆಯುತ್ತಿವೆ.

ಇದರ ನಡುವೆ 2024ರ ಐಪಿಎಲ್ ಟೂರ್ನಿ ಯಾವಾಗಿನಿಂದ ಆರಂಭವಾಗುತ್ತದೆ ಎನ್ನುವ ಕುತೂಹಲಕ್ಕೆ ಐಪಿಎಲ್ ಚೇರ್‌ಮನ್ ಅರುಣ್ ಧುಮಾಲ್ ತೆರೆ ಎಳೆದಿದ್ದಾರೆ. ಮಾರ್ಚ್ 22ರಿಂದ ಐಪಿಎಲ್ ಟೂರ್ನಿಗೆ ಚಾಲನೆ ಸಿಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ಇದೇ ವೇಳೆ ಭಾರತದಲ್ಲಿ ಲೋಕಸಭಾ ಚುನಾವಣೆ ಕೂಡಾ ನಡೆಯುವ ಸಾಧ್ಯತೆಯಿದೆ. ಇದರ ಹೊರತಾಗಿಯೂ ಸಂಪೂರ್ಣ ಐಪಿಎಲ್ ಟೂರ್ನಿಯನ್ನು ಭಾರತದಲ್ಲೇ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.

ನಾವು ಮುಂಬರುವ ಮಾರ್ಚ್ 22ರಿಂದ ಐಪಿಎಲ್ ಟೂರ್ನಿಯನ್ನು ಆಯೋಜಿಸಲು ಎದುರು ನೋಡುತ್ತಿದ್ದೇವೆ. ನಾವು ಸರ್ಕಾರದ ಏಜೆನ್ಸಿಗಳ ಜತೆಯಾಗಿಯೇ ಸಾಗುತ್ತಿದ್ದೇವೆ. ನಾವು ಮೊದಲಿಗೆ ಆರಂಭಿಕ ಹಂತದ ಐಪಿಎಲ್ ಟೂರ್ನಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಿದ್ದೇವೆ ಎಂದು ಪಿಟಿಐಗೆ ನೀಡಿದ ಪ್ರತಿಕ್ರಿಯೆಯಲ್ಲಿ ಅರುಣ್ ಧುಮಾಲ್ ತಿಳಿಸಿದ್ದಾರೆ.

ನಾವು ಐಪಿಎಲ್ ಟೂರ್ನಿಯ ಮೊದಲ 15 ದಿನದ ವೇಳಾಪಟ್ಟಿಯನ್ನು ರಿಲೀಸ್ ಮಾಡಲಿದ್ದೇವೆ. ಇದಾದ ಬಳಿಕ ಲೋಕಸಭಾ ಚುನಾವಣೆಯ ಘೋಷಣೆಯ ಬಳಿಕ ಇನ್ನುಳಿದ ಐಪಿಎಲ್ ವೇಳಾಪಟ್ಟಿ ರಿಲೀಸ್ ಮಾಡುತ್ತೇವೆ ಎಂದು ಅರುಣ್ ಧುಮಾಲ್ ಖಚಿತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!