ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರದೊಂದಿಗಿನ ಭಾಷಾ ವಿವಾದದಲ್ಲಿರುವ ತಮಿಳುನಾಡು ಸರ್ಕಾರವು ತನ್ನ 2025-26 ರ ರಾಜ್ಯ ಬಜೆಟ್ ಮೇಲೆ ದೇಶದ ಅಧಿಕೃತ ರೂಪಾಯಿ ಚಿಹ್ನೆ (₹) ಅನ್ನು ತಮಿಳು ಅಕ್ಷರ ‘ರು’ ನೊಂದಿಗೆ ಬದಲಾಯಿಸಿದೆ.
ಹಿಂದಿ ಹೇರಿಕೆ, ಭಾಷಾ ನೀತಿಗಳ ಕುರಿತು ನಡೆಯುತ್ತಿರುವ ಚರ್ಚೆ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ(NEP)2020ಕ್ಕೆ ರಾಜ್ಯದ ವಿರೋಧದ ನಡುವೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಸರ್ಕಾರ 2025-26 ರ ರಾಜ್ಯ ಬಜೆಟ್‌ನಲ್ಲಿ ರೂಪಾಯಿಯ ಅಧಿಕೃತ ಚಿಹ್ನೆ ‘₹’ ಕೈ ಬಿಟ್ಟಿದ್ದು ಬದಲಿಗೆ ‘ರುಬಾಯಿ’ (ತಮಿಳಿನಲ್ಲಿ ರೂಪಾಯಿ) ಯಿಂದ ‘ರು’ ಅನ್ನು ಆಯ್ಕೆ ಮಾಡಿಕೊಂಡು ಹೊಸ ಚರ್ಚೆಯನ್ನು ಹುಟ್ಟು ಹಾಕಿದ್ದಾರೆ.
ಬಜೆಟ್ ಭಾಷಣ ಮತ್ತು ಸಂಬಂಧಿತ ದಾಖಲೆಗಳ ತಮಿಳಿನಲ್ಲಿದ್ದು, ಶುಕ್ರವಾರ ಬೆಳಗ್ಗೆ ಬಜೆಟ್ ಮಂಡನೆಯಾಗಲಿದೆ.
ಹಿಂದಿನ ಎರಡು ಬಜೆಟ್‌ಗಳಲ್ಲಿ, ರಾಜ್ಯವು ತನ್ನ ಲೋಗೋಗಳಿಗಾಗಿ ರೂಪಾಯಿ ಚಿಹ್ನೆಯನ್ನು ಬಳಸಿತ್ತು. 2023-24ರ ಬಜೆಟ್‌ನಲ್ಲಿಯೂ ಸಹ ಈ ಚಿಹ್ನೆಯನ್ನು ಪ್ರಮುಖವಾಗಿ ತೋರಿಸಲಾಗಿತ್ತು, ಇದನ್ನು ಐಐಟಿ-ಗುವಾಹಟಿಯ ಪ್ರಾಧ್ಯಾಪಕರೊಬ್ಬರು ವಿನ್ಯಾಸಗೊಳಿಸಿದ್ದರು. ‘₹’ ಯಲ್ಲಿ ಹಿಂದಿಯ ‘ರಾ’ ಹೋಲಿಕೆ ಇರುವ ಹಿನ್ನೆಲೆಯಲ್ಲಿ ಬಳಸದಿರಲು ಸರ್ಕಾರ ನಿರ್ಧರಿಸಿದೆ.
ತಮಿಳುನಾಡು ಸರ್ಕಾರವು ಈ ಬದಲಾವಣೆಯ ಕುರಿತು ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ. ಆದಾಗ್ಯೂ, ಬಿಜೆಪಿ ವಕ್ತಾರ ನಾರಾಯಣನ್ ತಿರುಪತಿ ಅವರು, ಈ ಕ್ರಮವು ತಮಿಳು ಪಕ್ಷದ ನಿಲವು “ಭಾರತಕ್ಕಿಂತ ಭಿನ್ನ” ಎಂಬುದನ್ನು ಪ್ರತಿಬಿಂಬಿಸುತ್ತದೆ. ರೂಪಾಯಿ ಚಿಹ್ನೆಯನ್ನು ರಾಷ್ಟ್ರೀಯ ಲಾಂಛನವಾಗಿ ಗುರುತಿಸಲಾಗುತ್ತದೆ ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಡಿಎಂಕೆ ನಾಯಕ ಸರವಣನ್ ಅಣ್ಣಾದೊರೈ ಅವರು, ಇದರಲ್ಲಿ ಕಾನೂನುಬಾಹಿರ ಏನೂ ಇಲ್ಲ . ಇದು ಕೇಂದ್ರದೊಂದಿಗೆ ‘ಘರ್ಷಣೆ’ ಅಲ್ಲ. ನಾವು ತಮಿಳಿಗೆ ಆದ್ಯತೆ ನೀಡುತ್ತೇವೆ … ಅದಕ್ಕಾಗಿಯೇ ಸರ್ಕಾರ ಇದನ್ನು ಮುಂದುವರಿಸಿದೆ ಎಂದು ತಿಳಿಸಿದ್ದಾರೆ.
ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, 2025-26ರ ಡಿಎಂಕೆ ಸರ್ಕಾರದ ರಾಜ್ಯ ಬಜೆಟ್ ಮೇಲೆ ತಮಿಳನೊಬ್ಬ ವಿನ್ಯಾಸಗೊಳಿಸಿದ ರೂಪಾಯಿ ಚಿಹ್ನೆಯನ್ನು ಬಳಸಲಾಗಿದೆ. ರೂಪಾಯಿ ಲೋಗೋವನ್ನು ಇಡೀ ಭಾರತ ಅಳವಡಿಸಿಕೊಂಡಿದೆ ಮತ್ತು ನಮ್ಮ ಕರೆನ್ಸಿಯಲ್ಲಿ ಅದನ್ನು ಸೇರಿಸಲಾಗಿದೆ. ಈ ಚಿಹ್ನೆಯನ್ನು ವಿನ್ಯಾಸಗೊಳಿಸಿದ ತಿರು ಉದಯ್ ಕುಮಾರ್, ಮಾಜಿ ಡಿಎಂಕೆ ಶಾಸಕರ ಮಗ ಎಂದು ಹೇಳಿದ್ದಾರೆ.