ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕರ್ನಾಟಕದ ಮೂಲದ ಬೆಳಗಾವಿಯ ನಾಲ್ವರು ಮೃತಟ್ಟಿದ್ದಾರೆ. ಅಲ್ಲದೇ ಈ ಕಾಲ್ತುಳಿತದಲ್ಲಿ ಕರ್ನಾಟಕ ಮೂಲದ ನಾಗಸಾಧು ಒಬ್ಬರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕಾಲ್ತುಳಿತದಿಂದ ರಾಜನಾಥ್ ಮಹಾರಾಜ್(49) ಎನ್ನುವ ನಾಗಸಾಧು ಮೃತಪಟ್ಟಿದ್ದಾರೆ.
ಮೃತ ನಾಗಸಾಧು ರಾಜನಾಥ್ ಅವರು ಬಂಜಾರ ಗುರುಪೀಠದ ಪೀಠಾಧಿಪತಿ ಸರ್ಧಾರ್ ಸೇವಾಲಾಲ್ ಶ್ರೀ ಒಡನಾಡಿಯಾಗಿದ್ದರು. ಇವರು ಕಳೆದ 7 ವರ್ಷಗಳಿಂದ ಚಿತ್ರದುರ್ಗದ ಬಂಜಾರ ಗುರು ಪೀಠದಲ್ಲಿ ನೆಲೆಸಿದ್ದರು. ಕಳೆದ 15 ದಿನದ ಹಿಂದೆ ಅಷ್ಟೇ ಮಹಾಕುಂಭಮೇಳಕ್ಕೆ ಹೋಗಿದ್ದರು ಎಂದು ತಿಳಿದುಬಂದಿದೆ. ಇದೀಗ ಅವರ ಪಾರ್ಥಿವ ಶರೀರವನ್ನು ಚಿತ್ರದುರ್ಗಕ್ಕೆ ತರಬೇಕೆಂದು ಚಿತ್ರದುರ್ಗದ ಲಂಬಾಣಿ ಸೇವಾಲಾಲ್ ಗುರುಪೀಠದ ಪೀಠಾಧಿಪತಿ ಮನವಿ ಮಾಡಿದ್ದಾರೆ.
ಇನ್ನು ಈ ಬಗ್ಗೆ ಚಿತ್ರದುರ್ಗದ ಲಂಬಾಣಿ ಸೇವಾಲಾಲ್ ಗುರುಪೀಠದ ಪೀಠಾಧಿಪತಿ ಸರ್ಧಾರ್ ಸೇವಾಲಾಲ್ ಸ್ವಾಮೀಜಿ ಮಾತನಾಡಿ, ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟಿರುವ ರಾಜನಾಥ್ ಮಹಾರಾಜ್ ಪಾರ್ಥಿವ ಶರೀರವನ್ನು ಚಿತ್ರದುರ್ಗಕ್ಕೆ ತಲುಪಿಸಬೇಕೆಂದು ಉತ್ತರಪ್ರದೇಶ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅಲ್ಲದೇ ಆದಷ್ಟು ಬೇಗ ಪಾರ್ಥೀವ ಶರೀರ ತರಿಸುವಂತೆ ಕರ್ನಾಟಕ ಸರ್ಕಾರಕ್ಕೂ ಸಹ ಒತ್ತಾಯಿಸಿದ್ದಾರೆ.