ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಕಳೆದ ಕೆಲವು ದಿನಗಳಿಂದ ಇಂಡಿಗೋ ವಿಮಾನ ಏಕಾಏಕಿ ರದ್ದಾಗುತ್ತಿರುವ ಮತ್ತು ಗಂಟೆಗಟ್ಟಲೆ ವಿಳಂಬವಾಗುತ್ತಿರುವ ಕಾರಣದಿಂದ ಸಾವಿರಾರು ಪ್ರಯಾಣಿಕರು ನಗರಗಳಲ್ಲೇ ಕಾದು ಕುಳಿತಿದ್ದಾರೆ. ಈ ವಿಮಾನಯಾನ ಗೊಂದಲ ಇದೀಗ ಹೋಟೆಲ್ ವಲಯಕ್ಕೂ ನೇರ ಪರಿಣಾಮ ಬೀರಿದ್ದು, ಮಹಾನಗರಗಳ ಪಂಚತಾರಾ ಹೋಟೆಲ್‌ಗಳಲ್ಲಿ ರೂಮ್ ದರಗಳು ಅಸಾಧಾರಣವಾಗಿ ಏರಿಕೆಯಾಗಿದೆ.
ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್ ಹಾಗೂ ಚೆನ್ನೈ ನಗರಗಳಲ್ಲಿ ಸಾಮಾನ್ಯವಾಗಿ 10 ಸಾವಿರದಿಂದ 18 ಸಾವಿರ ರೂ. ಇದ್ದ ಡಿಲಕ್ಸ್ ಮತ್ತು ಸೂಪೀರಿಯರ್ ರೂಮ್‌ಗಳು ಇಂದು 40 ಸಾವಿರದಿಂದ 55 ಸಾವಿರ ರೂ.ವರೆಗೆ ಮಾರಾಟವಾಗುತ್ತಿವೆ. ಕೆಲವು ಪ್ರೀಮಿಯಂ ಸೂಟ್‌ಗಳ ದರ ಒಂದು ಲಕ್ಷ ದಾಟಿರುವುದೂ ವರದಿಯಾಗಿದೆ. ತಾಜ್, ಒಬೆರಾಯ್, ಐಟಿಸಿ, ಲೀಲಾ, ಶಾಂಗ್ರಿಲಾ ಸೇರಿದಂತೆ ಪ್ರಮುಖ ಹೋಟೆಲ್‌ಗಳಲ್ಲಿ ಕೊಠಡಿಗಳು ಬಹುತೇಕ ಲಭ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.
ಫ್ಲೈಟ್‌ಗಳ ಅಸ್ತವ್ಯಸ್ತತೆ, ಬದಲಿ ವಿಮಾನಗಳ ಸಿಗದಿರುವಿಕೆ, ಡಿಸೆಂಬರ್ ರಜೆ ಹಾಗೂ ಕ್ರಿಸ್‌ಮಸ್–ಹೊಸ ವರ್ಷದ ಹಬ್ಬದ ಕಾಲಾವಧಿ ಈ ಬೇಡಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ. ವಿದೇಶಿ ಪ್ರವಾಸಿಗರು, ವ್ಯಾಪಾರಿಗಳು ಹಾಗೂ ಚಿಕಿತ್ಸೆಗಾಗಿ ಬಂದಿರುವವರೂ ಹೋಟೆಲ್‌ಗಳನ್ನೇ ಅವಲಂಬಿಸಿದ್ದಾರೆ. ಹೆಚ್ಚಿನ ಹೋಟೆಲ್ ಬುಕ್ಕಿಂಗ್ ಆ್ಯಪ್‌ಗಳಲ್ಲಿ “ಸೋಲ್ಡ್ ಔಟ್” ಎಂಬ ಸಂದೇಶವೇ ಕಾಣುತ್ತಿದೆ.
ಹೋಟೆಲ್ ದರ ಏರಿಕೆ ಬಗ್ಗೆ ಪ್ರಯಾಣಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಸ್ಥಿತಿ ಇನ್ನೂ ಕೆಲ ದಿನ ಮುಂದುವರಿಯುವ ಸಾಧ್ಯತೆ ಇದೆ ಎಂಬುದು ಪ್ರವಾಸೋದ್ಯಮ ವಲಯದ ಅಂದಾಜು.

