ಹೊಸದಿಗಂತ ವರದಿ, ಬೀದರ್:
ಕೋರೋನಾದ ಕಾರಣ ಕಳೆದ ಒಂದೂವರೆ ವರ್ಷಗಳಿಂದ ನಿಲ್ಲಿಸಲಾಗಿದ್ದ ವಿಮಾನ ಸೇವೆಯನ್ನು ಇಂದು ಪುನರಾಂಭಿಸಿದ್ದು, ಬೀದರ ಜಿಲ್ಲೆಯ ಜನರಿಗೆ ಸಂತಸ ತಂದಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ. ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವರಾದ ಭಗವಂತ ಖೂಬಾ ಹೇಳಿದರು.
ಅವರು ಬುಧವಾರ ಬೀದರ ವಿಮಾನ ನಿಲ್ದಾಣದಲ್ಲಿ ಬೀದರ-ಬೆಂಗಳೂರು ಮಧ್ಯ ಪುನರ್ ಪ್ರಾರಂಭಿಸಿರುವ ಸ್ಟಾರ್‌ಏರ್ ವಿಮಾನ ಸೇವೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
2008 ರಲ್ಲಿಯೇ ಇಲ್ಲಿ ಟರ್ಮಿನಲ್ ಸ್ಥಾಪಿಸಲಾಯಿತು, ಅನೇಕ ಸರ್ಕಾರ ಮತ್ತು ಜನಪ್ರತಿನಿಧಿಗಳು ಬಂದರೂ ಕಾರ್ಯ ಪ್ರಾರಂಭವಾಗಿರಲಿಲ್ಲ. 2014ರ ನಂತರ ಸತತ ಪ್ರಯತ್ನ ಮಾಡಿ 2020ರ ಫೆಬ್ರವರಿ 7 ರಂದು ಬೀದರ ಬೆಂಗಳೂರು ಮಧ್ಯ ಮೊದಲ ವಿಮಾನ ಸೇವೆ ಆರಂಭಿಸಲಾಯಿತು. ಇಂದು ಸ್ಟಾರ್‌ಏರ್‌ನವರು ಕೇಂದ್ರ ಸರ್ಕಾರದ ಮನವಿಯಂತೆ ಬೀದರ ಜಿಲ್ಲೆಗೆ ತಮ್ಮ ಸೇವೆಯನ್ನು ವಾರದಲ್ಲಿ 4 ದಿನ ಒದಗಿಸಲಾಗುತ್ತಿದ್ದು, ಮುಂದಿನ ದಿನಮಾನಗಳಲ್ಲಿ ವಾರದ 7 ದಿನ ತಮ್ಮ ವಿಮಾನ ಸೇವೆಯನ್ನು ಬೀದರ ಜಿಲ್ಲೆಯ ಜನರಿಗೆ ಒದಗಿಸಬೇಕು ಹಾಗೂ ಈ ವಿಮಾನ ಸೇವೆಯ ಸದುಪಯೋಗವನ್ನು ಬೀದರ ಜನರು ಪಡೆದುಕೊಳ್ಳಬೇಕೆಂದು ಹೇಳಿದರು.
ಬೀದರ-ಕಲ್ಬುರ್ಗಿ ರೈಲ್ವೆ ಲೈನ್ ಮಂದ ಗತಿಯಲ್ಲಿ ಸಾಗುತ್ತಿದ್ದಾಗ ನಾನು ಸಂಸದನಾದ ಮೇಲೆ ಅದನ್ನು ಸಂಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಲಾಯಿತು. ಪ್ರಧಾನಮಂತ್ರಿ ಫಸಲವಿಮಾ ಯೋಜನೆಯ ಪರಿಹಾರವನ್ನು ಎಲ್ಲ ರೈತರಿಗೆ ಸಿಗುವಂತೆ ಮಾಡಲಾಗಿದೆ. ಬೀದರ ಔರಾದ ರಾಷ್ಟಿಯ ಹೆದ್ದಾರಿ, ಬೀದರ ನಾಂದೇಡ ರೈಲು ಹೊಸ ಮಾರ್ಗಕ್ಕೆ ಭಾರತ ಸರ್ಕಾರ ಮಂಜೂರಾತಿ ನೀಡಿದೆ. ಕಳೆದ 8 ವರ್ಷಗಳಲ್ಲಿ ನನ್ನ ಖಾತೆ ಜನರ ಭಾವನೆ ಮತ್ತು ಅವರ ಬಾಯಿಯಿಂದ ಬಾಯಿಗೆ ಬರುವ ಮಾತುಗಳು ಜನರ ಮಾತು ಎಲ್ಲ ಸಾಧ್ಯ ಎನ್ನುವಂತೆ ಮಾಡಿದ್ದೇನೆ. ಜಿಲ್ಲೆಗೆ ಸಿಪೇಡ್ ಕಾಲೇಜು ಮಂಜೂರಾಗಿದ್ದು ಮುಖ್ಯಮಂತ್ರಿಗಳು ಹಾಗೂ ಸಚಿವರಿಂದ ಉದ್ಘಾಟನೆ ಮಾಡಲಾಗುತ್ತದೆ. ಇತರೆ ಜಿಲ್ಲೆಗಳಿಗಿಂತ ನಾವು ಮುಂದಿದ್ದೇವೆ ಎಂದು ಹೇಳಿದರು.
ಬೆಂಗಳೂರಿನಿoದ ಬಂದ ಮೊದಲ ಸ್ಟಾರ್‌ಏರ್ ವಿಮಾನದಲ್ಲಿ 49 ಪ್ರಯಾಣಿಕರು ಆಗಮಿಸಿದರೆ, ಬೀದರನಿಂದ 42 ಪ್ರಯಾಣಿಕರು ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ವಿಮಾನ ಸೇವೆಯ ಆರಂಭ ತುಂಬಾ ಚೆನ್ನಾಗಿ ಆಗಿದೆ ಎಂದು ಸ್ಟಾರ್‌ಏರ್ ಸಂಸ್ಥೆಯವರು ಹೇಳಿದರು. ಬೀದರನಿಂದ ಬೆಂಗಳೂರಿಗೆ ಮೊದಲ ಟಿಕೇಟ ಬುಕ್ ಮಾಡಿದ್ದ ಮೊದಲ ಪ್ರಯಾಣಿಕರಿಗೆ ಬೋರ್ಡಿಂಗ್ ಪಾಸ್‌ನ್ನು ಅತಿಥಿ ಗಣ್ಯರು ವಿತರಿಸಿದರು.
ಎಓಸಿ ಸಮೀರ ಸೋಂದಿ, ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಡಾ.ಶೈಲೇಂದ್ರ ಕೆ.ಬೆಲ್ದಾಳೆ, ಬೀದರ ಉತ್ತರ ಶಾಸಕರಾದ ರಹೀಂ ಖಾನ, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಾಬು ವಾಲಿ, ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ ಬಾಬು, ಬೀದರ ವಿಮಾನ ನಿಲ್ದಾಣದ ನಿರ್ದೇಶಕರಾದ ಅಮೀತ್ ಮಿರ್ಶಾ, ಅಪರ ಜಿಲ್ಲಾಧಿಕಾರಿ ಶಿವುಕುಮಾರ ಶೀಲವಂತ, ಸ್ಟಾರ್‌ಏರ್ ಸಿನಿಯರ್ ಮ್ಯಾನೇಜರ್ ಕಿರಣ ಸೇರಿದಂತೆ ಇತರರು ಉಪಸ್ಥಿತರಿದ್ದರು.