ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಮಾಜಕ್ಕೆ ಬುದ್ಧಿವಾದ ಹೇಳಬೇಕಾಗಿರುವ ಹಿರಿಯರಿಬ್ಬರು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿಕೊಂಡು ಕೈಯಿಂದ ತಲೆಗೆ ಹೊಡೆದು, ಚೂರಿಯಿಂದ ಕೈಗೆ ಇರಿದು ಹಲ್ಲೆ ಮಾಡಿಕೊಂಡ ಅನಾಗರಿಕ ವರ್ತನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರದ ಕೋರ್ಟ್ ರಸ್ತೆಯಲ್ಲಿ ಗುರುವಾರ ನಡೆದಿದೆ.
ವಿಶೇಷವೆಂದರೆ ಇನ್ನೋರ್ವ ಹಿರಿಯ ವ್ಯಕ್ತಿಗೆ ಚೂರಿಯಿಂದ ಇರಿದಿರುವ ಆರೋಪಿ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಅವರ ಮಾವ ಉರಮಾಲು ಗುಣಶೇಖರ ಶೆಟ್ಟಿ ಎಂಬವರಾಗಿದ್ದಾರೆ.
ನಗರದ ಕೋರ್ಟ್ ರಸ್ತೆಯಲ್ಲಿ ವಾಹನಗಳ ಪಾರ್ಕಿಂಗ್ ವಿಷಯಕ್ಕೆ ಸಂಬಂಧಿಸಿ ಪರಸ್ಪರ ವಾಗ್ಯುದ್ಧ ನಡೆದು ಸದ್ದು ಯಾನೆ ಸದಾಶಿವ ಪೈ ಎಂಬವರಿಗೆ ಉರಮಾಲು ಗುಣಶೇಖರ ಶೆಟ್ಟಿ ಎಂಬವರು ಚೂರಿಯಿಂದ ಹಲ್ಲೆ ನಡೆಸಿದ್ದು, ಇದರ ಪರಿಣಾಮವಾಗಿ ಸದಾಶಿವ ಪೈ ಅವರ ಕೈಗೆ ಗಾಯವಾಗಿದೆ. ಬಲಗೈಗೆ ಗಾಯಗೊಂಡ ಸದಾಶಿವ ಪೈ ಅವರು ನಗರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅಲ್ಲಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಂತೆಯೇ, ಗುಣಶೇಖರ ಶೆಟ್ಟಿ ಅವರು ಸದಾಶಿವ ಪೈ ಅವರು ತಲೆಗೆ ಹೊಡೆದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಅವರೂ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸದಾಶಿವ ಪೈ
ಕಾರಿಗೆ ವಾಹನ ಅಡ್ಡ ಇಡಲಾಗಿದೆ ಎಂಬ ವಿಚಾರದಲ್ಲಿ ಗುಣಶೇಖರ್ ಶೆಟ್ಟಿ ಹಾಗೂ ಸದಾಶಿವ ಪೈ ಎಂಬವರ ಮಧ್ಯೆ ಆರಂಭಗೊಂಡ ವಾಗ್ಯುದ್ಧ ಈ ಗಲಾಟೆ ನಡೆದು, ಹಲ್ಲೆ, ದೂರು, ಪ್ರತಿದೂರಿನೊಂದಿಗೆ ಕೊನೆಗೊಂಡಿದೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.