ಪಾಡ್ದನ ಕಲಾವಿದೆ, ರಾಜ್ಯಪ್ರಶಸ್ತಿ ಪುರಸ್ಕೃತೆ ಗಿಡಿಗೆರೆ ರಾಮಕ್ಕ ನಿಧನ

ದಿಗಂತ ವರದಿ ಕಟೀಲು :

ಸಿರಿಪಾಡ್ದನದ ಮೂಲಕ ಖ್ಯಾತರಾದ ಪಾಡ್ದನ ಕಲಾವಿದೆ ರಾಜ್ಯಪ್ರಶಸ್ತಿ ಪುರಸ್ಕೃತ ಗಿಡಿಗೆರೆ ರಾಮಕ್ಕ ಮೊಗೇರ ಸೋಮವಾರ ಕಟೀಲು ಗಿಡಿಗೆರೆಯ ಮನೆಯಲ್ಲಿ ನಿಧನರಾದರು. ಅವರಿಗೆ 102 ವರ್ಷ ವಯಸ್ಸಾಗಿತ್ತು.

ಅಕ್ಷರಾಭ್ಯಾಸದ ಹೊರತಾಗಿಯೂ ಓ ಬೆಲೆ, ನಲ್ಲೊರಿ ಮಾಮ, ಮಂಜೊಟ್ಟಿ ಗೋಣ, ಗೋವಿಂದ ಬದನೆ, ಕನಡ,ಮಾಲ್ಂಡ್ ಮರ, ಕುಮಾರ, ಸಿರಿ, ಬಂಟರು, ಅಬ್ಬಗ-ದಾರಗೆ ಸೇರಿದಂತೆ ಹಲವಾರು ದೈವಿಕ ಆಚರಣೆ ಹಾಗು ಶ್ರಮಿಕ ಸಂಸ್ಕ್ರತಿಯ ಸಂಧಿ- ಪಾಡ್ದನಗಳು ಇವರಿಗೆ ಕಂಠಪಾಠ. ಇವರು ದೀರ್ಘವಾಗಿ ಹಾಡಿರುವ ‘ ಸಿರಿ ಪಾಡ್ದನ ‘ ವು ಎ.ವಿ.ನಾವಡರ ಸಂಪಾದಕತ್ವದಲ್ಲಿ ‘ ರಾಮಕ್ಕ ಮುಗ್ಗೇರ್ತಿ ಕಟ್ಟಿದ ಸಿರಿಪಾಡ್ದನ ‘ ಎಂದು ಗ್ರಂಥರೂಪದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪ್ರಕಟವಾಗಿದೆ.

ರಾಮಕ್ಕ ಮುಗ್ಗೇರ್ತಿ ಇವರು ಮಂಗಳೂರು ತಾಲೂಕಿನ ವಾಮಂಜೂರಿನಲ್ಲಿ ಜನಿಸಿದರು. ತಂದೆ ಕೂಕ್ರ ಮುಗ್ಗೇರ ಹಾಗು ತಾಯಿ ದುಗ್ಗಮ್ಮ. ತಮ್ಮ 17 ನೇ ವಯಸ್ಸಿನಲ್ಲಿ ಕಟೀಲಿನ ಸಮೀಪದ ಗಿಡಿಗೆರೆಯ ಕಾಪೀರ ಮುಗ್ಗೇರ ಇವರನ್ನು ಮದುವೆಯಾದರು. ಮುಂದೆ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಪಾಡ್ದನ ಕಟ್ಟುವ, ಅದನ್ನು ನಾಟಿಗದ್ದೆಗಳಲ್ಲಿ ಹಾಡುವ ಕೆಲಸ ಅವರಿಂದ ನಡೆಯಿತು. ಇವರಿಗೆ ತುಳು ಕವಿತೆ, ಪಾಡ್ದನ ಮತ್ತು ಸಂಧಿಗಳು ತಮ್ಮ ಅಜ್ಜಿಯಿಂದ ಬಳುವಳಿಯಾಗಿ ಬಂದಿದೆ.

2000 ದಲ್ಲಿ ವೀರರಾಣಿ ಅಬ್ಬಕ್ಕ ಪ್ರಶಸ್ತಿ, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ, ಕಟೀಲು ದೇವಳದ ‘ ಪಾಡ್ದನ ಕೋಗಿಲೆ ‘ ಬಿರುದು, 2001 ರಲ್ಲಿ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಪ್ರಶಸ್ತಿ,  2015 ರಲ್ಲಿ ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ. 2004-05ನೆ ಸಾಲಿನ ಕರ್ನಾಟಕ ತುಳುಸಾಹಿತ್ಯ ಅಕಾಡೆಮಿಯ ಸದಸ್ಯತ್ವ ಅಲ್ಲದೆ ನೂರಾರು ಗೌರವಗಳು ಸಂಮಾನಗಳು ಸಂದಿವೆ. ಅವರು 6 ಗಂಡು. ಓರ್ವ ಹೆಣ್ಣು ಮಗಳನ್ನು ಅಗಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!