ಹೊಸದಿಗಂತ ವರದಿ, ಹುಬ್ಬಳ್ಳಿ:
ಇತ್ತೀಚೆಗೆ ಕೇಂದ್ರ ಸರ್ಕಾರ ಮಂಡಿಸಿದ ಉತ್ತಮ ಬಜೆಟ್ ನಂತೆ ಅವರ ಸಹಕಾರ ಮತ್ತು ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ಜನಸ್ನೇಹಿ ಬಜೆಟ್ ನೀಡಲಾಗುತ್ತದೆ ಎಂದು ಕೈಮಗ್ಗ, ಜವಳಿ ಮತ್ತು ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಉತ್ತಮ ಬಜೆಟ್ ನೀಡಲು ರಾಜ್ಯ ಸರ್ಕಾರ ಎಲ್ಲ ತಯಾರಿ ನಡೆಸಿದೆ. ಕೊರೋನಾ ಸಂದರ್ಭದಲ್ಲಿ ತೊಂದರೆಯಾದ ಜನಸಾಮಾನ್ಯರಿಗೆ ಪರಿಹಾರ ನೀಡುವ ಕಾರ್ಯ ಮಾಡಲಾಗುತ್ತೆ ಎಂದರು.
ರಾಜ್ಯದಲ್ಲಿ ಕೈಮಗ್ಗ ಮತ್ತು ಜವಳಿ ವಸ್ತುಗಳಿಗೆ ಅತೀಯಾದ ಬೇಡಿಕೆ ಇದೆ. ಆದರೆ ಉತ್ಪಾದನೆ ಮಾಡುತ್ತಿರುವುದು ಕಡಿಮೆಯಿದ್ದು, ರಾಜ್ಯ ಸರ್ಕಾರ ಗಾರ್ಮೇಂಟ್ಸ್, ನೇಕಾರರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಹಕಾರ ನೀಡುತ್ತದೆ ಎಂದು ತಿಳಿಸಿದರು.
ಹಳ್ಳಿಗಳಲ್ಲಿಯೂ ಸಹ ಟೆಕ್ಸಟೈಲ್ ಪಾರ್ಕ ಪ್ರಾರಂಭಿಸಲಾಗಿದೆ ಇದರಿಂದ ಗ್ರಾಮೀಣ ಭಾಗದ ಮಹಿಳೆಯರಿಗೆ ಉದ್ಯೋಗ ಪಡೆಯುತ್ತಿದ್ದು, ಅವರು ಸಹ ಸ್ವಾವಲಂಬಿಯಾಗಿದೆ ಬದುಕು ನಡೆಸುವಂತಾಗಿದೆ. ಗಾರ್ಮೇಂಟ್ಸ್ ಗಳಲ್ಲಿ ಶೇ.90 ರಷ್ಟು ಜನರು ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಸದ್ಯದಲ್ಲೇ ಮಹದಾಯಿ ಮತ್ತು ಕಳಸಾ ಬಂಡೂರಿಯ ಸಿಹಿ ಸುದ್ದಿ ರಾಜ್ಯ ಸರ್ಕಾರ ನೀಡಲಿದೆ. ಈ ಕಾಮಗಾರಿಗೆ ಈಗಾಗಲೇ ಭೂಮಿ ಪೂಜೆ ಮತ್ತು ಕಳೆದ ಬಾರಿ ಬಜೆಟ್ ನಲ್ಲಿ 500 ಕೋಟಿ ರೂ. ಮೀಸಲಿಟ್ಟಿದ್ದು, ಡಿಆರ್ ಪಿ ಪಡೆಯಲು ಅನುಮತಿ ಕೇಳಲಾಗಿದೆ ಎಂದು ತಿಳಿಸಿದರು.
ಹು-ಧಾ ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ, ವಕ್ತಾರ ರವಿ ನಾಯಕ ಇದ್ದರು.