ಹೊಸದಿಗಂತ ಬಾಗಲಕೋಟೆ :
ದರ್ಮದ ಹೆಸರಿನಲ್ಲಿ ರಾಜ್ಯಭಾರ ನಡೆಯುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೂರಕ ಅಲ್ಲವೆಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ನವನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ ಎದ್ದರೆ ಸಾಕು ದೇಶದಲ್ಲಿ ಧರ್ಮದ ಹೆಸರಿನಲ್ಲಿ ರಾಜಕೀಯ, ಜಾತಿ ವ್ಯವಸ್ಥೆಯಲ್ಲಿ ವಿಷ ಬೀಜ ಬಿತ್ತುವ ಕೆಲಸ ನಡೆಯುತ್ತಿದೆ ಎಂದು ಸಚಿವ ತಿಮ್ಮಾಪುರ ಕಳವಳ ವ್ಯಕ್ತಪಡಿಸಿದರು.
ದೇಶದಲ್ಲಿ ಸಶಕ್ತರು ಗ್ಯಾಸ ಸಬ್ಸಿಡಿಯನ್ನು ಬಿಡಬೇಕು ಎಂದು ಪ್ರಧಾನಿ ಮೋದಿಯವರು ಜನರಿಗೆ ಹೇಳುವವರು ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಕುರಿತು ಸಣ್ಣತನ ಹೇಳಿಕೆ ನೀಡುವುದನ್ನು ಬಿಡಬೇಕು. ಗ್ಯಾರಂಟಿ ಯೋಜನೆ ಪಡೆಯುವವರು ಸಶಕ್ತರಿದ್ದರೆ ಬಿಡಬಹುದು ಎಂದು ನಮ್ಮ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿರುವುದರಲ್ಲಿ ತಪ್ಪೇನಿಲ್ಲ ಎಂದು ಹೇಳಿದರು.
ಜಿಲ್ಲೆಯ ಲೋಕಾಪುರ ಸಮೀಪ ಜೆ.ಕೆ.ಸಿಮೆಂಟ್ ಕಾರ್ಖಾನೆಯಿಂದ ಅಕ್ರಮ ಗಣಿಗಾರಿಕೆ ನಡೆದ ಬಗ್ಗೆ ಗಮನಕ್ಕೆ ಬಂದಿಲ್ಲ. ಆದರೆ ಕಲ್ಲು ಸ್ಪೋಟದಿಂದ ಬೆಳೆ, ಮನೆಗಳಿಗೆ ಹಾನಿಯಾಗುತ್ತಿರುವ ಕುರಿತು ಮಾಹಿತಿ ಪಡೆಯಲಾಗಿದೆ ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದರು.
ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಲ್ಲಿ ಅವ್ಯವಹಾರ ಮಾಡಿರುವ ಅಧಿಕಾರಿಗಳನ್ನು ಈಗಾಗಲೇ ಸಸ್ಪಂಡೆ ಮಾಡಲಾಗಿದೆ. ಇನ್ನೂ ಸೋಮವಾರದಿಂದ ಈ ಸ್ವತ್ತು ಖಾತೆ ಉತಾರ ಕೊಡುವ ಕೆಲಸ ನಡೆಯಲಿದೆ ಆಸ್ತಿ ಖರೀದಿ ಮಾಡಿಕೊಳ್ಳಲು ಅವಕಾಶ ಸಿಗಲಿದೆ ಎಂದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನ ಮಠ ಪತ್ರಿಕಾಗೋಷ್ಠಿಯಲ್ಲಿದ್ದರು.