Wednesday, November 29, 2023

Latest Posts

ರಾಜ್ಯ ಸಚಿವ ಸಂಪುಟ ಸಭೆ: ಇಲ್ಲಿದೆ ಪ್ರಮುಖ ಹೈಲೈಟ್ಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮುಖ್ಯಮಂತ್ರಿ ಸಿದ್ಧರಾಮಯ್ಯ ( Chief Minister Siddaramaiah ) ಅವರ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ( Karnataka Cabinet Meeting ) ನಡೆಯಿತು. ಸಭೆಯಲ್ಲಿ ಪ್ರಮುಖ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಸಚಿವ ಹೆಚ್.ಕೆ ಪಾಟೀಲ್ ( Minister H.K Patil ) ಅವರು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ, ಸಂಪುಟದ ನಿರ್ಧಾರಗಳನ್ನು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೃಷಿಭಾಗ್ಯ ಯೋಜನೆ ಪುನರಾರಂಭ ಮಾಡಲಾಗುತ್ತದೆ. 2023-24ನೇ ಸಾಲಿನಲ್ಲಿ ಮಳೆ ಆಶ್ರಿತ 106 ತಾಲೂಕುಗಳಲ್ಲಿ 100ಕೋಟಿ ಮೊತ್ತದಲ್ಲಿ ಚಾಲನೆ ನೀಡಲಾಗುತ್ತದೆ ಎಂದರು.

ಮುಖ್ಯ ಕಾರ್ಯದರ್ಶಿಗಳ ಕಾಲಾವಧಿ ಈ ತಿಂಗಳಾಂತ್ಯಕ್ಕೆ ಕೊನೆಯಾಗುವ ಹಿನ್ನೆಲೆಯಲ್ಲಿ, ಸೇವಾನುಭವ ಹೊಂದಿರುವ ಹಿರಿಯ ಅಧಿಕಾರಿಗಳ ಮಾಹಿತಿಯನ್ನು ಸಂಪುಟದಲ್ಲಿ ಚರ್ಚಿಸಲಾಗಿದೆ. ಸಿಎಸ್ ನೇಮಕಾತಿ ವಿಚಾರದ ಪರಮಾಧಿಕಾರವನ್ನು ಮುಖ್ಯಮಂತ್ರಿ ಗಳಿಗೆ ನೀಡಲಾಗಿದೆ ಎಂದು ಹೇಳಿದರು.

ಸಂವಿಧಾನ ದಿನಾಚರಣೆ ಪ್ರಯುಕ್ತ ನವೆಂಬರ್ 26ರಂದು ಕಾರ್ಯಕ್ರಮ ನಿಗದಿ ಮಾಡಲಾಗಿದೆ. ಸಮಾಜ ಕಲ್ಯಾಣ ಇಲಾಖೆಯಿಂದ 18 ಕೋಟಿ ವೆಚ್ಚದ ಕಾರ್ಯಕ್ರಮ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಮತ್ತೆ ‘ಕೃಷಿ ಭಾಗ್ಯ’ ಯೋಜನೆ ( Krishi Bhagya Scheme ) ಪ್ರಾರಂಭ ಮಾಡಲಿದ್ದೇವೆ. 2023-24ನೇ ಸಾಲಿನಲ್ಲಿ ಅಡಿ 24 ಜಿಲ್ಲೆಗಳ 106 ತಾಲೂಕಿನಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಜಾರಿಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಪ್ರಧಾನಮಂತ್ರಿ ಕೃಷಿ ಸಿಂಚಯ ಯೋಜನೆ ಅಡಿ 5 ತಾಲೂಕಿನಲ್ಲಿ ಜಾರಿಗೆ ಅನುಮೋದನೆ ನೀಡಲಾಗಿದೆ. 2025-26 ನೇ ಸಾಲಿನವರೆಗೆ ಪ್ರಧಾನ ಮಂತ್ರಿ ಕೃಷಿ ಸಂಚಯ ಯೋಜನೆ ಒಟ್ಟು 38 ಕೋಟಿ ಮೊತ್ತದ್ದಾಗಿದೆ ಎಂದರು.

ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಗೆ ( Pradhan Mantri Fasal Bima Yojana ) ವಿಮಾ ಕಂಪೆನಿ ನಿಗದಿ ಮಾಡಿ ಕ್ಯಾಬಿನೆಟ್ ನಿರ್ಣಯ ಕೈಗೊಳ್ಳಲಾಗಿದೆ.

ಕ್ಲಸ್ಟರ್ ವಾರು ವಿಮಾ ಸಂಸ್ಥೆಗಳ ನಿಗದಿಗೆ ಘಟನೋತ್ತರ ಅನುಮೋದನೆ ನೀಡಲಾಗಿದೆ. 10 ಕ್ಲಸ್ಟರ್ ಗಳಲ್ಲಿ ರಿಲಾಯನ್ಸ್ ಜನರಲ್ ಇನ್ಶುರೆನ್ಸ್, ಬಜಾಜ್ ಅಲೈಯನ್ಸ್, ಎಸ್ಬಿಐ ಜನರಲ್ ಇನ್ಶುರನ್ಸ್, ಯುನಿವರ್ಸಲ್ ಸೊಂಪು ಜನರಲ್ ಇನ್ಶುರೆನ್ಸ್, ಫ್ಯೂಚರ್ ಇನ್ಶುರೆನ್ಸ್ ಕಂಪನಿಗಳಿಗೆ ನಿಗದಿ ಪಡಿಸಲಾಗಿದೆ. ಕೃಷಿ ಯಂತ್ರಧಾರೆ ಕೇಂದ್ರ ಬಲಪಡಿಸಲು ಹೈಟೆಕ್ ಹಾರ್ವೇಸ್ಟರ್ ಹಬ್ ಸ್ಥಾಪನೆಗೆ ಕ್ಯಾಬಿನೆಟ್ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ನಿವೃತ್ತಿ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿ ನೇಮಕದ ಕುರಿತು ಚರ್ಚೆಯನ್ನು ಕ್ಯಾಬಿನೆಟ್ ನಲ್ಲಿ ನಡೆಸಲಾಗಿದೆ. ಚೀಫ್ ಸೆಕ್ರೆಟರಿ ನೇಮಕಕ್ಕೆ ಸಿಎಂಗೆ ಪರಮಾಧಿಕಾರವನ್ನು ಕ್ಯಾಬಿನೆಟ್ ನೀಡಿದೆ. ರಜನೀಶ್ ಗೋಯೆಲ್, ವಿ ಮಂಜುಳಾ, ಅಜಯ್ ಸೇಠ್, ರಾಕೇಶ್ ಸಿಂಗ್, ಶಾಲಿನಿ ರಜನೀಶ್, ಎಲ್ ಕೆ ಅತೀಕ್ ಸೇರಿ ಹಲವರ ಸೀನಿಯಾರಿಟಿ ಬಗ್ಗೆ ಪ್ರಸ್ತಾಪವಾಗಿದೆ ಎನ್ನಲಾಗಿದೆ. ಆದರೇ ಸೀನಿಯಾರಿಟಿ ಪ್ರಕಾರ ಚೀಫ್ ಸೆಕ್ರೆಟರಿ ನೇಮಕ ಮಾಡಲು ನಿರ್ಣಯವನ್ನು ಸಿಎಂ ಕೈಗೊಳ್ಳಲಿದ್ದಾರೆ.

ರಾಜ್ಯಪಾಲರ ಸಚಿವಾಲಯಕ್ಕೆ ಸರ್ಜನ್ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ಡಾ. ನವೀನ್ ಕುಮಾರ್ ನೇಮಕ ಮಾಡಿ ಕ್ಯಾಬಿನೆಟ್ ನಿರ್ಣಯ ಕೈಗೊಳ್ಳಲಾಗಿದೆ. ಲೋಕಾಯುಕ್ತಕ್ಕೆ ಗುತ್ತಿಗೆ ಆಧಾರದ ಲೆಕ್ಕಾಧೀಕ್ಷಕರ ನೇಮಕ ಮಾಡಲು ಇಂದಿನ ಕ್ಯಾಬಿನೆಟ್ ನಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಬೆಳಗಾವಿಯ ಸುವರ್ಣಸೌಧದಲ್ಲಿ ಡಿಸೆಂಬರ್.4ರಿಂದ ಹತ್ತು ದಿನಗಳ ಕಾಲ ಚಳಿಗಾಲದ ವಿಧಾನ ಮಂಡಲದ ಅಧಿವೇಶನ ನಡೆಸೋದಕ್ಕೆ ಇಂದಿನ ರಾಜ್ಯ ಸಚಿವ ಸಂಪುಟ ಸಭೆಯು ನಿರ್ಧಾರ ಕೈಗೊಂಡಿದೆ ಎಂದರು.

ಬರದ ಸಮಸ್ಯೆ ವಿಚಾರವಾಗಿ ಸಂಪುಟದಲ್ಲಿ ಚರ್ಚೆ ನಡೆಸಲಾಗಿದೆ. ಪರಿಹಾರ ನೀಡದ ಕೇಂದ್ರದ ಕ್ರಮದ ಬಗ್ಗೆ ಕಳವಳ ವ್ಯಕ್ತಪಡಿಸಲಾಯಿತು. ಕೇಂದ್ರದ ಮಲತಾಯಿಧೋರಣೆ ವಿರುದ್ಧ ಆಕ್ರೋಶ ವ್ಯಕ್ತವಾಯಿತು. ನರೇಗಾ ಕಾರ್ಯಕ್ರಮದ ಕೆಲಸದ ದಿನ ಹೆಚ್ಚಿಸಲು ಚರ್ಚೆ ನಡೆಸಲಾಗಿದೆ. ಜಿಲ್ಲಾಧಿಕಾರಿಗಳು ತಮ್ಮ ಅನುದಾನದ ಹಣ ಬಳಸಿ ಕಾರ್ಯಕ್ರಮ ರೂಪಿಸಲು ಸೂಚನೆ ನೀಡಲಾಗಿದೆ ಎಂದು ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!