May 19, 2026
Tuesday, May 19, 2026
spot_img

ಕುಡಿಯಲು ನೀರು ಕೊಡದ ರಾಜ್ಯ ಸರ್ಕಾರದಿಂದ ಏಳು ಸಾವಿರ ವೈನ್‌ಶಾಪ್ ಆರಂಭ: ಸಂಸದ ಕಾರಜೋಳ ವಾಗ್ದಾಳಿ

ಹೊಸದಿಗಂತ ವರದಿ, ಚಿತ್ರದುರ್ಗ :

ರಾಜ್ಯದ ಜನತೆಗೆ ಕುಡಿಯುವ ನೀರು ಕೊಡಲಾಗದ ರಾಜ್ಯ ಸರ್ಕಾರ, 7000 ವೈನ್‌ಶಾಪ್‌ಗಳನ್ನು ಆರಂಭಿಸಲು ಲೈಸೆನ್ಸ್ ನೀಡಿದೆ. ಇದೇ ರಾಜ್ಯ ಕಾಂಗ್ರೆಸ್ ಸರ್ಕಾರದ ಮೂರು ವರ್ಷದ ಸಾಧನೆ ಎಂದು ಸಂಸದ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದರು.

ಜಿಲ್ಲೆಯ 300 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ

ನಗರದ ಜೆಸಿಆರ್ ಬಡಾವಣೆಯಲ್ಲಿರುವ ಸಂಸದರ ಕಾರ್ಯಾಲಯದಲ್ಲಿ ಮಂಗಳವರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಕೇಂದ್ರ ಸರ್ಕಾರದ ಬಹುಗ್ರಾಮ ಕುಡಿಯುವ ಯೋಜನೆ ನಿಂತು ಹೋಗಿದೆ. ರಾಜ್ಯ ಸರ್ಕಾರ ಅರಣ್ಯ ಇಲಾಖೆಯಿಂದ ಕ್ಲಿಯರೆನ್ಸ್ ಕೊಡಿಸಿಲ್ಲ. ಚಿತ್ರದುರ್ಗ ಜಿಲ್ಲೆಯಲ್ಲೇ ಸುಮಾರು 300 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಇದ್ಯಾವುದನ್ನೂ ಲೆಕ್ಕಿಸದ ರಾಜ್ಯ ಸರ್ಕಾರ ಜನರ ಹಣದಲ್ಲಿ ಸಾಧನಾ ಸಮಾವೇಶ ಮಾಡುತ್ತಾ ಬೀಗುತ್ತಿದೆ ಎಂದು ಕಿಡಿಕಾರಿದರು.

ಜನರನ್ನು ಸಾಲದಲ್ಲಿ ಮುಳುಗಿಸಿದ ಸರಕಾರ

ರಾಜ್ಯದ ಜನರಿಗೆ ಗ್ಯಾರಂಟಿ ಆಸೆ ತೋರಿಸಿ ಅಧಿಕಾರಕ್ಕೆ ಬಂದ ಸರಕಾರ, 7400 ಕೋಟಿ ರೂ. ಸಾಲ ಮಾಡಿದೆ. ರಾಜ್ಯ ಜನರನ್ನು ಸಾಲದಲ್ಲಿ ಮುಳುಗಿಸಿದೆ. ರಾಜ್ಯದಲ್ಲಿ ದಲಿತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಅತ್ಯಾಚಾರ, ಕೊಲೆ ಸುಲಿಗೆ ನಡೆಯುತ್ತಿವೆ. ಇದ್ಯಾವುದರ ಪರಿವೆಯೇ ಇಲ್ಲದ ರಾಜ್ಯ ಸರ್ಕಾರ ಭ್ರಷ್ಟಾಚಾರ, ದುರಾಡಳಿತದಲ್ಲಿ ಮುಳುಗಿದೆ. 48,000 ಕೋಟಿ ಎಸ್‌ಸಿಪಿ, ಟಿಎಸ್‌ಪಿ ಹಣವನ್ನು ದುರುಪಯೋಗ ಮಾಡಲಾಗಿದೆ. ಎಸ್‌ಸಿ, ಎಸ್‌ಟಿ ಅಭಿವೃದ್ಧಿಗೆ ಶೇ.24 ರಷ್ಟು ಅನುದಾನ ಮೀಸಲಿರಿಸುವುದಾಗಿ ಕಾನೂನು ಮಾಡಿದ ಸಿದ್ದರಾಮಯ್ಯ ಅದನ್ನು ಅನುಷ್ಟಾನಗೊಳಿಸಿಲ್ಲ ಎಂದು ದೂರಿದರು.

ಕುರ್ಚಿ ಕಂಟಕ ನಿವಾರಣೆಗೆ ಸಮಾವೇಶ

ಉಚಿತ ವಿದ್ಯುತ್‌ಗೆ 20000 ಕೋಟಿ ಖರ್ಚು ಮಾಡಿರುವುದಾಗಿ ಹೇಳುತ್ತಿದ್ದಾರೆ. ಆದರೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನರಿಂದ 40,000 ಕೋಟಿ ಹಣ ಕಿತ್ತಿದ್ದಾರೆ. ರೈತರಿಗೆ ಕನಿಷ್ಟ 7 ಗಂಟೆಗಳ ಕಾಲ ನಿರಂತರ ಗುಣಮಟ್ಟದ ವಿದ್ಯುತ್ ನೀಡುತ್ತಿಲ್ಲ. ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚಲು 34 ಕೋಟಿ ವೆಚ್ಚವಾಗಿದೆ. ಆದರೆ ರಸ್ತೆಗಳಲ್ಲಿ ಗುಂಡಿಗಳು ಮಾತ್ರ ಹಾಗೆ ಇವೆ. ಇಷ್ಟಾದರೂ ಸಮಾವೇಶದ ಹೆಸರಿನಲ್ಲಿ ಅನಗತ್ಯ ಖರ್ಚು ಮಾಡಲಾಗುತ್ತಿದೆ. ಕುರ್ಚಿ ಕಂಟಕ ನಿವಾರಣೆ ಮಾಡಿಕೊಳ್ಳಲು ತುಮಕೂರಿನಲ್ಲಿ ಸಮಾವೇಶ ಮಾಡಲಾಗುತ್ತಿದೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ನಲ್ಲಿ ಮೂರು ಗುಂಪುಗಳಾಗಿದ್ದು, ಕುರ್ಚಿಗಾಗಿ ಕಾಳಗ ನಡೆಯುತ್ತಿದೆ. ಡಿಕೆಶಿ ಬಣ, ಸಿದ್ದರಾಮಯ್ಯ ಬಣ, ದಲಿತ ಬಣದ ನಡುವೆ ಕುರ್ಚಿಗಾಗಿ ನಿರಂತರ ಕಿತ್ತಾಟ ನಡೆಯುತ್ತಿದೆ. ಕುರ್ಚಿಗೆ ಕಂಟಕ ಬಂದಾಗಲೆಲ್ಲಾ ದಲಿತ ಮುಖ್ಯಮಂತ್ರಿ ಕೂಗು ಮುನ್ನೆಲೆಗೆ ಬರುತ್ತಿದೆ. ಕಳೆದ ಮೂರು ವರ್ಷಗಳಿಂದ 630 ಹಳ್ಳಿಗಳಲ್ಲಿ ಅಂಗನವಾಡಿ ಕಟ್ಟಡಗಳಿಲ್ಲ. ಸರ್ಕಾರಿ ಶಾಲಾ ಕಾಲೇಜುಗಳ ಕೊಠಡಿಗಳು ಹಾಳಾಗಿವೆ. ಶಾಸಕರಿಗೆ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾಣ ನೀಡುತ್ತಿಲ್ಲ. ಹೀಗಿದ್ದೂ ಯಾವ ಪುರುಷಾರ್ಥಕ್ಕೆ ಸಮಾವೇಶ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯುದ್ಧದ ಪರಿಣಾಮದಿಂದ ಇಡೀ ಜಗತ್ತಿಗೆ ಸಂಕಷ್ಟ ಎದುರಾಗಿದೆ. ಇದರಿಂದ ಮಿತವ್ಯಯ ಮಾಡುವಂತೆ ಪ್ರಧಾನಿ ಕರೆ ನೀಡಿದ್ದಾರೆ. ಆದರೆ ಕಾಂಗ್ರೆಸ್‌ನವರು ಇದನ್ನು ತಪ್ಪಾಗಿ ಬಿಂಬಿಸುತ್ತಿದ್ದಾರೆ. ಕಾಂಗ್ರೆಸ್ ಆಡಳಿತದ ಸಮಯದಲ್ಲಿ ದೇಶದಲ್ಲಿ ಆಹಾರ ಸಮಸ್ಯೆ ಉಂಟಾದಾಗ ದೇಶದ ಜನರು ಒಂದು ಹೊತ್ತಿನ ಊಟ ಬಿಟ್ಟು ಬೆಂಬಲಿಸಿದ್ದಾರೆ. ಅದನ್ನು ಮರೆತಿರುವ ಕಾಂಗ್ರೆಸ್ ನವರು ಪ್ರಧಾನಿ ಮೋದಿಯವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ದುಂದು ವೆಚ್ಚಕ್ಕೆ ಕಡಿವಾಣ ಹಾಕದ ಡೋಂಗಿ ಅಹಿಂದ ನಾಯಕ ಸಿದ್ದರಾಮಯ್ಯ ಪ್ರಧಾನಿ ಬಗ್ಗೆ ಮಾನಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ವಿಭಾಗ ಸಹ ಪ್ರಭಾರಿ ಎ.ಮುರುಳಿ, ಉಪಾಧ್ಯಕ್ಷ ಡಾ.ಸಿದ್ದಾರ್ಥ ಗುಂಡಾರ್ಪಿ, ವೆಂಕಟೇಶ್ ಯಾದವ್, ಮೋಹನ್ ಕುಮಾರ್, ಪರಶುರಾಂ, ರಾಜಣ್ಣ, ನಗರಸಭೆ ಮಾಜಿ ಸದಸ್ಯ ಶಶಿಕುಮಾರ್, ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್ ಮತ್ತಿತರರು ಹಾಜರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !