ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನನ್ನ ತಂದೆ ಸತೀಶ್ ಜಾರಕಿಹೊಳಿ ಅವರೇ ಸಿಎಂ ಆಗಲಿದ್ದಾರೆ ಎಂದು ಚಿಕ್ಕೋಡಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದ್ದು, ಜಾರಕಿಹೊಳಿ ಮತ್ತೆ ಸಿಎಂ ಆಗಲಿದ್ದಾರೆ ಎಂಬ ವಿಶ್ವಸವಿದೆ ಎಂದರು.
ಈ ಮಧ್ಯೆ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಸಿದ್ದರಾಮಯ್ಯ, ತಮ್ಮ ನಡುವೆ ಮನಸ್ತಾಪ ಸೃಷ್ಟಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ತಮ್ಮ30 ವರ್ಷಗಳ ಬಾಂಧವ್ಯ ಹಾಗೆಯೇ ಇದೆ ಎಂದು ಹೇಳಿದರು.
ರಾಜಕೀಯ ಲಾಭಕ್ಕಾಗಿ ಕೆಲವರು ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಮನಸ್ತಾಪಕ್ಕೆ ಪ್ರಯತ್ನಿಸುತ್ತಿದ್ದಾರೆ. ಅವರು ಅದರಲ್ಲಿ ಯಶಸ್ವಿಯಾಗುವುದಿಲ್ಲ. ಸಿದ್ದರಾಮಯ್ಯ ಅವರೊಂದಿಗೆ ಉತ್ತಮ ಸಂಬಂಧವಿದೆ. ಅವರೊಂದಿಗೆ ಯಾವುದೇ ವೈಯಕ್ತಿಕ ಮನಸ್ತಾಪ ಇಲ್ಲ ಎಂದು ಅವರು ತಿಳಿಸಿದರು.
ಮೂರು ದಶಕಗಳಿಂದಲೂ ಸಿದ್ದರಾಮಯ್ಯ ಅವರನ್ನು ಬೆಂಬಲಿಸುತ್ತಾ ಬಂದಿದ್ದೇನೆ. ಅವರ ವಿರುದ್ಧ ಎಂದಿಗೂ ನಕಾರಾತ್ಮಕವಾಗಿ ಸ್ಪಂದಿಸಿಲ್ಲ. ಇತ್ತೀಚಿಗೆ ಕೆಲವು ಮಾಧ್ಯಮಗಳು ನನ್ನ ಹೇಳಿಕೆಗಳನ್ನು ತಿರುಚಿವೆ ಎಂದು ಅವರು ಹೇಳಿದರು.



