ರಾಜ್ಯ ಸರಕಾರದ ಯುವನಿಧಿ ಯೋಜನೆ: ಈವರೆಗೆ 19,392 ಯುವಕರು ನೋಂದಣಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಸರಕಾರದ ಯುವನಿಧಿ (Yuvanidhi) ಯೋಜನೆಗೆ ಇದುವರೆಗೆ 19,392 ಯುವಕರು ನೋಂದಣಿ ಮಾಡಿಕೊಂಡಿರುವುದಾಗಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯಿಂದ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಡಿ.26ರಂದು ವಿಧಾನಸೌಧದ ಬ್ಯಾಂಕ್ವೇಟ್​ ಹಾಲ್​ನಲ್ಲಿ ಯುವನಿಧಿ ನೋಂದಣಿ ಪ್ರಕ್ರಿಯೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಜನವರಿ 12ರಂದು ಸ್ವಾಮಿ ವಿವೇಕಾನಂದರ ಜನ್ಮದಿನದಂದು ಶಿವಮೊಗ್ಗದಲ್ಲಿ ಈ ಯೋಜನೆಗೆ ಅಧಿಕೃತ ಚಾಲನೆ ಸಿಗಲಿದೆ. ಅಂದು ನಿರುದ್ಯೋಗಿ ಯುವಕರ ಖಾತೆಗೆ ನೇರವಾಗಿ ಹಣ ಜಮೆ ಆಗಲಿದೆ.

ಈ ಯೋಜನೆಗೆ ಪ್ರಸಕ್ತ ವರ್ಷದಲ್ಲಿ 250 ಕೋಟಿ ರೂ. ಹಾಗೂ ಮುಂದಿನ ವರ್ಷಕ್ಕೆ 1,250 ಕೋಟಿ ರೂ. ವೆಚ್ಚ ತಗುಲಲಿದೆ. ಯುವನಿಧಿ ಯೋಜನೆಯು 2022-23ನೇ ಸಾಲಿನಲ್ಲಿ ಪದವಿ, ಡಿಪ್ಲೋಮಾ ತೇರ್ಗಡೆ ಆಗಿ 6 ತಿಂಗಳಿಂದ ಉದ್ಯೋಗ ಸಿಗದೇ ಇರುವವರಿಗೆ ಮಾತ್ರ ಅನ್ವಯವಾಗಲಿದೆ. ಅಲ್ಲದೇ ನಿರುದ್ಯೋಗದ ಬಗ್ಗೆ ಸ್ವತಂತ್ರ ಪರಿಶೀಲನೆ ಇರಬೇಕು. ಉದ್ಯೋಗ ಇದ್ದರೂ ಯೋಜನೆ ಲಾಭ ಪಡೆಯಲು ಮುಂದಾದರೆ ದಂಡ ವಿಧಿಸುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.

2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪದವಿ ಪಡೆದಿರಬೇಕು. ಈ ಶೈಕ್ಷಣಿಕ ವರ್ಷದಲ್ಲಿ ಪದವಿ ಪಡೆದು 6 ತಿಂಗಳು ಪೂರೈಸಿರಬೇಕು. ಉನ್ನತ ಶಿಕ್ಷಣ ವ್ಯಾಸಂಗಕ್ಕೆ ಸೇರದಿರೋರು ಅರ್ಜಿ ಸಲ್ಲಿಸಬಹುದು. ಯಾವುದೇ ಉದ್ಯೋಗಕ್ಕೆ ಸೇರದೆ ಇರುವವರು ಅರ್ಹರಾಗುತ್ತಾರೆ. ಪದವಿ ಮತ್ತು ಡಿಪ್ಲೋಮಾ ತೇರ್ಗಡೆ ಆದವರಿಗೆ ಮಾತ್ರ ಅವಕಾಶ. ನಿರುದ್ಯೋಗಿ ಪದವೀಧರರಿಗೆ ಮಾಸಿಕ 3 ಸಾವಿರ ಆರ್ಥಿಕ ನೆರವು. ಡಿಪ್ಲೋಮಾ ಪೂರೈಸಿದವರಿಗೆ ಮಾಸಿಕ 1,500 ರೂ. ಆರ್ಥಿಕ ನೆರವು ಸಿಗಲಿದೆ.

ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ
ಯುವನಿಧಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು sevasindhu.karnataka.gov.in ಸೇವಾಸಿಂಧು ಪೋರ್ಟಲ್, ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಒನ್ ಸೇರಿದಂತೆ ಇತರೆ ಸೇವಾ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಮಾಡಿಕೊಳ್ಳಲು ಅಭ್ಯರ್ಥಿಗಳು ಯಾವುದೇ ಶುಲ್ಕವನ್ನು ಭರಿಸಬೇಕಾದ ಅಗತ್ಯ ಇಲ್ಲ ಎಂದು ಸರ್ಕಾರ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!