ಹೊಸದಿಗಂತ ವರದಿ ರಾಯಚೂರು:
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಗೃಹ ಸಚಿವರು ಸಂಪೂರ್ಣವಾಗಿ ವಿಫಲಾರಾಗಿದ್ದಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.
ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ದಿನ ಬೆಳಗಾಗುತ್ತಲೇ ಆರ್.ಎಸ್.ಎಸ್ ಕುರಿತು ಮಾತನಾಡುವ ಗೃಹ ಸಚಿವರು ರಾಯಚೂರು ಜಿಲ್ಲೆಯಲ್ಲಿ ನಡೆದ ದಲಿತರ ಕಗ್ಗೋಲೆ ಇವರಿಗೆ ಕಾಣಿಸುತ್ತಿಲ್ಲವೇ. ದಲಿತರ ಕುರಿತು ಉದ್ದುದ್ದ ಮಾತನಾಡುವ ಇವರು ಇಗೆಲ್ಲಿ ಹೋಗಿದ್ದಾರೆ ಎಂದು ಪ್ರಶ್ನಿಸಿದರು.
ರಾಯಚೂರು ಜಿಲ್ಲೆಯಲ್ಲಿ ಅಶ್ವಿನಿ ಎಂಬ ಯುವತಿಯ ಮೇಲೆ ಆತ್ಯಾಚಾರ ಕೊಲೆ, ಲಿಂಗಸೂಗೂರು ಕರಡಗಲ್‌ನಲ್ಲಿ ರಾಣಿ ಅತ್ಯಾಚಾರ, ಕೊಲೆ ಹಾಗೂ ಭೂಮಾನಂದ ಕೊಲೆ ಘಟನೆ ಜರುಗಿದೆ. ರಾಜ್ಯದಲ್ಲಿ ನಿರಂತರವಾಗಿ ದೌರ್ಜನ್ಯ, ಕೊಲೆ, ಅತ್ಯಾಚಾರ ಘಟನೆಗಳು ನಡೆದರೂ ಗೃಹಸಚಿವರು ಮಾತನಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದ್ವೇಷಕ್ಕಾಗಿ ದಲಿತ ಸಮುದಾಯದವರ ಜೀವ ಬಲಿಯಾಗುತ್ತಿವೆ. ಕಲ್ಯಾಣಕರ್ನಾಟಕ ಭಾಗದವರೇ ಗೃಹಸಚಿವರಾಗಿದ್ದು ಇಲ್ಲಿಯ ದಲಿತರ ಬವಣೆ ಕೇಳಲು ಇವರಿಗೆ ಸಮಯವಿಲ್ಲವೆ. ಈ ಎಲ್ಲ ಘಟನೆಗಳನ್ನು ಗಮನಿಸಿದರೆ ಗೃಹ ಸಚಿವರ ರಾಜ್ಯದಲ್ಲಿಯೇ ಇದ್ದಾರೆಯೇ ಎಂದು ಪ್ರಶ್ನಿಸಿದರು.
ಕಲ್ತಾಣ ಕರ್ನಾಟಕ ವಿಶೇಷವಾಗಿ ಕಲ್ಯಾಣ ಕರ್ನಾಟಕದ ರಾಯಚೂರು, ಯಾದಗಿರಿ, ಬೀದರ ಸೇರಿದಂತೆ ಆನೇಕ ಜಿಲ್ಲೆಗಳಲ್ಲಿ ಡ್ರಗ್ಸ್ , ಗಾಂಜಾ ಎಗ್ಗಿಲ್ಲದೇ ಮಾರಾಟ ನಡೆಯುತ್ತಿದ್ದು, ಯುವಕರ ಆರೋಗ್ಯ ಮಾತ್ರ ಕೆಡುತ್ತಿಲ್ಲ. ಸಮಾಜದ ಆರೋಗ್ಯವೂ ಕೆಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳು ಪೋಸ್ಟ್‌ಮನ್ ಕೆಲಸ ಮಾಡಿದ್ದಾರೆ. ಮೂರು ಕೊಲೆಗಳಾದರೂ ಸರ್ಕಾರಕ್ಕೆ ಸಮಗ್ರ ವರದಿ ನೀಡಿಲ್ಲ. ಸರ್ಕಾರಕ್ಕೆ ದಲಿತರ ರಕ್ಷಣೆ ಬೇಕಿಲ್ಲವೇ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಈ ಹಿಂದೆ ಡಾ.ಪರಮೇಶ್ವರ್ ಗೃಹ ಸಚಿವರಾಗಿದ್ದಾಗಲೂ ಇದೇ ಸ್ಥಿತಿಯಿತ್ತು ಎಂದರು.
ಇಂದಿನ ರಾಜ್ಯದ ಸ್ಥಿತಿಯನ್ನು ಗಮನಿಸಿದರೆ ಹಾಲು ಕೊಡುವ ಎಮ್ಮೆ ಮಾರಿ ಕೋಳಿ ಕೊಂಡಂತಾಗಿದೆ. ಈಗಿನ ಗೃಹ ಸಚಿವರು ನಿತ್ಯ ಪ್ರಚಾರ ಬೇಕೆ ಹೊರತು ಜನರ ರಕ್ಷಣೆಯಲ್ಲ ಎಂಬುದು ಸಾಬೀತಾಗಿದೆ ಎಂದು ಹೇಳಿದರು.
ಇದನ್ನೂ ಓದಿ:
ಜಿಲ್ಲೆಯ ಮೂರು ಘಟನೆಗಳು ನಡೆದ ಗ್ರಾಮಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವದಾಗಿ ಹೇಳಿದರು. ಸದನ ಹಿನ್ನಲೆಯಲ್ಲಿ ಭೇಟಿ ನೀಡಲು ಆಗಿರಲಿಲ್ಲ. ಮೂರು ದಿನ ಮುಂಚಿತವಾಗಿಯೇ ಸರ್ಕಾರ ಗಂಟು ಮೂಟೆ ಕಟ್ಟಿಕೊಂಡು ಓಡಿ ಹೋಗಿದೆ ಎಂದು ವ್ಯಂಗ್ಯವಾಡಿದರು.
ಈ ಸಂದರ್ಬದಲ್ಲಿ ನಗರಸಭೆ ಮಾಜಿ ಸದಸ್ಯ ಪಿ.ಯಲ್ಲಪ್ಪ, ಛಲವಾದಿ ಮಹಾಸಭಾ ಅಧ್ಯಕ್ಷ ಶಿವರಾಜ ಜಾನೇಕಲ್ ಸೇರಿ ಅನೇಕ ಮುಖಂಡರುಗಳಿದ್ದರು.



