ಕನ್ನಡ ಹೋರಾಟಗಾರರ ಬಿಡುಗಡೆಗೆ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯ

ಹೊಸ ದಿಗಂತ ವರದಿ, ಮೈಸೂರು :

ಬೆಂಗಳೂರಿನಲ್ಲಿ ಕನ್ನಡ ನಾಮಫಲಕ ಅಳವಡಿಸುವ ವಿಚಾರವಾಗಿ ನಡೆದ ಹೋರಾಟದಲ್ಲಿ ಬಂಧಿಸಲಾಗಿರುವ ಕನ್ನಡ ಹೋರಾಟಗಾರರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯಿಸಿದರು.

ಶುಕ್ರವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಪರವಾಗಿ ಹೋರಾಟ ಮಾಡುವ ಯಾವುದೇ ಕನ್ನಡ ಪರ ಚಳವಳಿಗೆ ಕರ್ನಾಟಕ ರಾಜ್ಯ ರೈತ ಸಂಘ ಬೆಂಬಲ ನೀಡುತ್ತದೆ. ಆದರೆ ಅಂತಹ ಹೋರಾಟಗಳು ಶಾಂತಿ ಮತ್ತು ಅಹಿಂಸಾತ್ಮಕವಾಗಿರಬೇಕು. ಯಾವುದೇ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳಿಗೆ ಹಾನಿಯುಂಟು ಮಾಡಬಾರದು ಎಂದು ಹೇಳಿದರು.

ರಾಜ್ಯದಲ್ಲಿರುವ ಎಲ್ಲಾ ಅಂಗಡಿ, ಆಸ್ಪತ್ರೆ, ಹೋಟೆಲ್,ವ್ಯಾಪಾರಿ ಸಂಸ್ಥೆ ನಾಮಫಲಕಗಳಲ್ಲಿ ಶೇ.೬೦ ರಷ್ಟು ಭಾಗ ಕನ್ನಡ ಭಾಷೆಯಲ್ಲೇ ಇರಬೇಕು ಎಂಬ ನೀತಿಯನ್ನು ಜಾರಿಗೆ ತರಲು, ಹಾಗೂ ಇದರ ಅನುಷ್ಠಾನಕ್ಕೆ ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ಕಾಯ್ದೆ ತಿದ್ದುಪಡಿಗೆ ಸುಗ್ರೀವಾಜ್ಞೆ ಹೊರಡಿಸಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಹೇಳಿರುವುದನ್ನು ರೈತ ಸಂಘ ಸ್ವಾಗತಿಸುತ್ತದೆ ಎಂದರು.

ಸಚಿವ ಶಿವಾನಂದ ಪಾಟೀಲ್ ರೈತರಲ್ಲಿ ಕ್ಷಮೆಯಾಚಿಸಬೇಕು:
ರೈತ ಸಮುದಾಯವನ್ನು ಅವಹೇಳನ ಮಾಡಿರುವ ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಕೂಡಲೇ ಬಹಿರಂಗವಾಗಿ ರೈತ ಕುಲದ ಕ್ಷಮೆಯಾಚಿಸಬೇಕು. ಮುಂದೆoದೂ ಇಂತಹ ಅವಹೇಳನಕಾರಿ ಹೇಳಿಕೆಯನ್ನು ರೈತರ ವಿರುದ್ಧ ನೀಡುವುದಿಲ್ಲವೆಂದು ಸಾರ್ವಜನಿಕವಾಗಿ ಘೋಷಿಸಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಮಾತನಾಡಿ, ನಂಜನಗೂಡು ತಾಲ್ಲೂಕಿನ ಕಸುವಿನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಸಿದ್ಧಯ್ಯನ ಹುಂಡಿ ಸರ್ಕಲ್ ಬಳಿ ಮಧ್ಯದಂಗಡಿ ತೆರೆಯುವುದನ್ನು ವಿರೋಧಿಸಿ ಮಹಿಳೆಯರು ನಡೆಸುತ್ತಿದ್ದ ಪ್ರತಿಭಟನೆಯನ್ನು ಪೊಲೀಸರು ಹತ್ತಿಕ್ಕಿರುವುದು ಖಂಡನೀಯ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಪ್ರಸನ್ನ ಎನ್.ಗೌಡ, ಪಿ. ಮರಂಕಯ್ಯ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!