ಹೊಸದಿಗಂತ ಡಿಜಿಟಲ್ ಡೆಸ್ಕ್:
ರೈತರ ಪ್ರತಿಭಟನೆ ಬಳಿಕ ರದ್ದಾಗಿದ್ದ ಮೂರು ಕೃಷಿ ಕಾನೂನುಗಳನ್ನು ಮತ್ತೆ ಜಾರಿ ಮಾಡಬೇಕು ಎಂದು ಹೇಳಿಕೆ ನೀಡಿದ್ದ ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ ಬಹಿರಂಗ ಕ್ಷಮೆ ಕೇಳಿದ್ದಾರೆ.
ತಮ್ಮ ಮಾತಿನಿಂದ ಯಾರಿಗಾದರೂ ನಿರಾಸೆಯಾಗಿದ್ದರೆ ಪಶ್ಚಾತ್ತಾಪ ಪಡುತ್ತೇನೆ ಎಂದು ತಮ್ಮ ಹೇಳಿಕೆಯನ್ನು ವಾಪಸ್ ತೆಗೆದುಕೊಂಡಿದ್ದಾರೆ.
ಮಂಡಿ ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಸಂಸದರಾಗಿರುವ ಕಂಗನಾ ರಣಾವತ್ ಇಂದು ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿ ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡಿದ್ದಾರೆ.
ನಾನು ಬರೀ ನಟಿಯಲ್ಲ. ರಾಜಕಾರಣಿಯೂ ಆಗಿದ್ದೇನೆ ಮತ್ತು ನನ್ನ ಅಭಿಪ್ರಾಯಗಳು ವೈಯಕ್ತಿಕವಾಗಿರಬಾರದು. ಅದು ಪಕ್ಷದ ಪ್ರತಿಬಿಂಬವಾಗಿರಬೇಕು. ರೈತರ ಕಾನೂನುಗಳ ಬಗ್ಗೆ ನನ್ನ ಅಭಿಪ್ರಾಯಗಳು ವೈಯಕ್ತಿಕವಾಗಿವೆ. ನನ್ನ ಹೇಳಿಕೆಗಳು ಪಕ್ಷದ ನಿಲುವನ್ನು ಪ್ರತಿನಿಧಿಸುವುದಿಲ್ಲ. ನನ್ನ ಅಭಿಪ್ರಾಯಗಳು ಮತ್ತು ಮಾತುಗಳಿಂದ ನಾನು ಯಾರನ್ನಾದರೂ ನಿರಾಶೆಗೊಳಿಸಿದ್ದರೆ ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ನಾನು ನನ್ನ ಮಾತನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಕಂಗನಾ ರಣಾವತ್ ಅವರು ಮಾರುಕಟ್ಟೆಯಲ್ಲಿ ಕಾರ್ಮಿಕರೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಕೃಷಿ ಕಾನೂನುಗಳ ಬಗ್ಗೆ ಹೇಳಿಕೆ ನೀಡಿದ್ದರು.