ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋವಿಡ್ ಭ್ರಷ್ಟಾಚಾರಗಳ ಕುರಿತು ಮೈಕಲ್ ಕುನ್ಹಾ ಅವರ ಆಯೋಗದ ವರದಿಯಲ್ಲಿ ಮಾಜಿ ಸಿಎಂ ಬಿಎಸ್ ವೈ ಹಾಗೂ ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್ ಗೆ ಶಿಫಾರಸ್ಸು ಮಾಡಿರುವ ಬೆನ್ನಲ್ಲೇ ಜಸ್ಟೀಸ್ ಕುನ್ಹಾ ಅವರನ್ನ ಕಾಂಗ್ರೆಸ್ ಏಜೇಂಟ್ ಎಂದು ಪ್ರಲ್ಹಾದ್ ಜೋಶಿ ನೀಡಿದ್ದ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತವಾಗಿದ್ದು, ಜೋಶಿ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ರಾಜ್ಯ ಸರ್ಕಾರದ ಮುಖ್ಯ ವಕ್ತಾರ ದಿನೇಶ್ ಗುಂಡೂರಾವ್ ಹಾಗೂ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಇಂದು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.
ದೂರು ಸಲ್ಲಿಕೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ನಿವೃತ್ತ ನ್ಯಾಯಮೂರ್ತಿಯಾಗಿ ಜಸ್ಟೀಸ್ ಕುನ್ಹಾ ಅವರು ಅತ್ಯಂತ ಪ್ರಮಾಣಿಕವಾಗಿ ಕಾರ್ಯನಿರ್ವಹಿಸಿದವರು. ಗೌರವಾನ್ವಿತರ ಬಗ್ಗೆ ಕೇಂದ್ರ ಸಚಿವರಾಗಿ ಪ್ರಲ್ಹಾದ್ ಜೋಶಿ ವೈಯಕ್ತಿಕ ನಿಂದನೆ ಮಾಡಿ ಮಾತನಾಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದು ಪ್ರಲ್ಹಾದ್ ಜೋಶಿ ಅವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ತಮ್ಮ ಹೇಳಿಕೆಗೆ ಪ್ರಲ್ಹಾದ್ ಜೋಶಿ ಕ್ಷಮೆ ಕೇಳಬೇಕು ಎಂದು ಆಗ್ರಹಿದರು.
ಕೇಂದ್ರ ಸಚಿವರು ಎಂದಾಕ್ಷಣ ಏನು ಬೇಕಾದರು ಮಾತನಾಡಬಹುದು ಎಂಬ ಅಹಂಕಾರ ಪ್ರವೃತ್ತಿಯಲ್ಲಿ ಪ್ರಲ್ಹಾದ್ ಜೋಶಿಯವರಿದ್ದಾರೆ. ಇತ್ತಿಚೆಗೆ ಜೋಶಿ ಅವರು ಹೇಳಿಕೆಗಳು ಅಹಂಕಾರದಿಂದ ಕೂಡಿವೆ. ಜಸ್ಟೀಸ್ ಆಗಿದ್ದವರನ್ನ ಕಾಂಗ್ರೆಸ್ ಏಜೆಂಟ್ ಎಂದರೆ ಏನರ್ಥ.ಜೋಶಿಯವರು ರಾಜಕಾರಣಿಗಳಾದ ನಮ್ಮ ಮೇಲೆ ಮಾತನಾಡಲಿ. ಅಥವಾ ಕಾನೂನು ಹೋರಾಟ ನಡೆಸಲಿ. ಆದರೆ ಗೌರವಾನ್ವಿತ ನ್ಯಾಯಮೂರ್ತಿಗಳ ವೈಯಕ್ತಿಕ ನಿಂಧನೆ ಸರಿಯಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಕಮಿಷನ್ inquiry act 1952 ಪ್ರಕಾರ ಪ್ರಲ್ಹಾದ್ ಜೋಶಿ ಅವರ ಹೇಳಿಕೆ ಕಾನೂನು ಬಾಹಿರವಾಗಿದೆ. 6 ತಿಂಗಳ ವರೆಗೆ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಹೀಗಾಗಿ ಈ ವಿಚಾರವನ್ನ ರಾಷ್ಟ್ರಪತಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲು ರಾಜ್ಯಪಾಲರಿಗೆ ದೂರು ಸಲ್ಲಿಸಲಾಗಿದೆ. ರಾಜ್ಯಪಾಲರು ನಮ್ಮ ಅಹಾವಾಲುಗಳನ್ನ ತಾಳ್ಮೆಯಿಂದ ಆಲೀಸಿದ್ದು, ಈ ರೀತಿಯ ವೈಯಕ್ತಿಕ ಹೇಳಿಕೆಗಳನ್ನ ನೀಡುವುದು ಸರಿಯಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಇದೇ ವೇಳೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.