ವಿಂಡೀಸ್‌ ವಿರುದ್ಧ ಭರ್ಜರಿ ಶತಕ: ಟೆಸ್ಟ್‌ ಶತಕವೀರರ ಪಟ್ಟಿಯಲ್ಲಿ ಕೊಹ್ಲಿ, ರೂಟ್​ ಹಿಂದಿಕ್ಕಿದ ಸ್ಟೀವ್ ಸ್ಮಿತ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪರ್ತ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನ ಎರಡನೇ ದಿನ ಶತಕವನ್ನು ಸಿಡಿಸಿ ಅಬ್ಬರಿಸಿರುವ ಆಸಿಸ್ ಬ್ಯಾಟಿಂಗ್ ದಿಗ್ಗಜ ಸ್ಟೀವ್ ಸ್ಮಿತ್ ಈ ಮೂಲಕ ಸಕ್ರಿಯ ಕ್ರಿಕೆಟಿಗರಲ್ಲಿ ಕೊಹ್ಲಿ, ರೂಟ್‌ ಹಿಂದಿಕ್ಕಿ ಅತಿಹೆಚ್ಚು ಶತಕ ಸಿಡಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ಜೊತೆಗೆ ಸ್ಮಿತ್ ಸರ್ ಡಾನ್ ಬ್ರಾಡ್ಮನ್ ಅವರ 29 ಟೆಸ್ಟ್ ಶತಕಗಳ ದಾಖಲೆಯನ್ನು ಸರಿಗಟ್ಟಿದ್ದಾರೆ.
ಸ್ಮಿತ್ ತಮ್ಮ 88ನೇ ಟೆಸ್ಟ್ ಪಂದ್ಯದಲ್ಲಿ ಈ ಹೆಗ್ಗುರುತನ್ನು ತಲುಪಿದ್ದಾರೆ. ಆಸಿಸ್ ಗ್ರೇಟ್‌ ಕ್ರಿಕೆಟಿಗ ಡಾನ್‌ ಬ್ರಾಡ್ಮನ್ ಜುಲೈ 1948 ರಲ್ಲಿ ಲೀಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ತಮ್ಮ 51 ನೇ ಟೆಸ್ಟ್‌ನಲ್ಲಿ ತಮ್ಮ 29 ನೇ ಟೆಸ್ಟ್ ಶತಕವನ್ನು ಗಳಿಸಿದ್ದರು. ಅದು ಬ್ರಾಡ್‌ಮನ್ ವೃತ್ತಿಜೀವನದ ಅಂತಿಮ ಟೆಸ್ಟ್ ಆಗಿತ್ತು.
ಆಸ್ಟ್ರೇಲಿಯಾ ಪರ ರಿಕಿ ಪಾಂಟಿಂಗ್ (41), ಸ್ಟೀವ್ ವಾ (32) ಮತ್ತು ಮ್ಯಾಥ್ಯೂ ಹೇಡನ್ (30) ಸ್ಮಿತ್‌ ಗಿಂತ ಹೆಚ್ಚು ಶತಕಗಳನ್ನು ಗಳಿಸಿದ್ದಾರೆ.

179 ಎಸೆತಗಳ ಎದುರಿಸಿದ ಸ್ಮಿತ್ ಒಂಬತ್ತು ಬೌಂಡರಿಗಳೊಂದಿಗೆ ಶತಕ ಸಿಡಿಸಿ ಸಂಭ್ರಮಿಸಿದರು. ಈ ವರ್ಷ ಜುಲೈನಲ್ಲಿ ಗಾಲೆಯಲ್ಲಿ ಶ್ರೀಲಂಕಾ ವಿರುದ್ಧ ಅಜೇಯ 145 ರನ್ ಗಳಿಸಿದ ನಂತರ ಮೂರು ಇನ್ನಿಂಗ್ಸ್‌ಗಳ ಅಂತರದಲ್ಲಿ ಸ್ಮಿತ್ ಅವರ ಎರಡನೇ ಶತಕವಾಗಿದೆ.
ಸ್ಮಿತ್ ಪ್ರಸ್ತುತ ಪೀಳಿಗೆಯ ಶ್ರೇಷ್ಠ ಬ್ಯಾಟಿಂಗ್ ದಿಗ್ಗಜರಾದ ಭಾರತದ ವಿರಾಟ್ ಕೊಹ್ಲಿ, ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಮತ್ತು ಇಂಗ್ಲೆಂಡ್‌ನ ಜೋ ರೂಟ್ ಅವರನ್ನು ಶತಕಗಳ ಸಂಖ್ಯೆಯಲ್ಲಿ ಹಿಂದಿಕ್ಕಿದ್ದು ವಿಶೇಷ.
ಕೊಹ್ಲಿ 102 ಟೆಸ್ಟ್‌ಗಳಿಂದ 27 ಶತಕಗಳನ್ನು ಗಳಿಸಿದ್ದಾರೆ. ವಿಲಿಯಮ್ಸನ್ 88 ಟೆಸ್ಟ್‌ಗಳಲ್ಲಿ 24 ಶತಕಗಳನ್ನು ಮತ್ತು ರೂಟ್ 125 ಟೆಸ್ಟ್‌ಗಳಿಂದ 28 ಶತಕಗಳನ್ನು ಗಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!