November 3, 2026
Tuesday, November 3, 2026
spot_img

ಸ್ಟಿಂಗ್ ಆಪರೇಷನ್ ವಿಡಿಯೋ ವಿದೇಶದಲ್ಲಿ ಅಪ್’ಲೋಡ್: ಸಚಿವ ನರೇಂದ್ರಸ್ವಾಮಿ

ಹೊಸದಿಗಂತ ವರದಿ ಮಡಿಕೇರಿ:

ಸಿದ್ದರಾಮಯ್ಯ ವಿರುದ್ಧ ನಡೆದಿದೆ ಎನ್ನಲಾದ ಸ್ಟಿಂಗ್‌ ಆಪರೇಷನ್‌ ಪ್ರಕರಣ ಕುರಿತು ಸಿಸಿಬಿ ಪೊಲೀಸರು ನಡೆಸಿದ ತನಿಖೆಯಲ್ಲಿ ವಿದೇಶಗಳಲ್ಲಿ ವೀಡಿಯೋ ಅಪ್’ಲೋಡ್ ಮಾಡಿರುವುದು ಬೆಳಕಿಗೆ ಬಂದಿದ್ದು, ಈ ಬೆಳವಣಿಗೆಯಿಂದ ಹಲವು ಪ್ರಶ್ನೆಗಳು ಉದ್ಭವಿಸಿವೆ ಎಂದು ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಅವರು ಹೇಳಿದ್ದಾರೆ.

ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಸಿಬಿ ತನಿಖೆಯಲ್ಲಿ ಅಮೆರಿಕಾ, ಕೆನಡಾ ಹಾಗೂ ಕಠ್ಮಂಡು ಮೂಲಕ ಕೆಲವು ಬೆಳವಣಿಗೆಗಳು ನಡೆದಿರುವುದು ಕಂಡು ಬಂದಿದ್ದು, ಕೆನಡಾದಲ್ಲಿ ವಿಡಿಯೋ ಅಪ್‌ಲೋಡ್ ಮಾಡಿದವರು ಯಾರು? ಅವರನ್ನು ಕಠ್ಮಂಡು ಮೂಲಕ ಭಾರತಕ್ಕೆ ಕರೆತಂದವರು ಯಾರು? ತನಿಖೆ ಆರಂಭವಾಗುತ್ತಿದ್ದಂತೆ ಸಿಸಿಬಿ ನೋಟಿಸ್ ನೀಡಿದ ಮೂವರು ಯಾಕೆ ವಿಚಾರಣೆಗೆ ಹಾಜರಾಗುತ್ತಿಲ್ಲ? ಅವರು ಯಾವ ಪಕ್ಷದವರು, ಯಾರ ಬೆಂಬಲಿಗರು ಎಂಬುದನ್ನು ಸಂಬಂಧಿಸಿದವರು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

ಪ್ರಕರಣದ ತನಿಖೆ ದೆಹಲಿಗೆ ತಲುಪಿರುವುದರ ಬಗ್ಗೆಯೂ ಪ್ರಶ್ನೆ ಎತ್ತಿದ ನರೇಂದ್ರಸ್ವಾಮಿ, ಯಾರನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ ಎಂಬುದನ್ನು ತನಿಖೆಯೇ ಬಹಿರಂಗಪಡಿಸಲಿ ಎಂದಿದ್ದಾರೆ.
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಭಿನ್ನಾಭಿಪ್ರಾಯ ಮೂಡಿಸಿ ಕಾಂಗ್ರೆಸ್ ಪಕ್ಷವನ್ನು ಒಡೆಯುವ ಪ್ರಯತ್ನ ನಡೆಯುತ್ತಿದೆ. ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿ ರಾಜ್ಯಕ್ಕೆ ನೀಡಿರುವ ಕೊಡುಗೆ, ಅನುದಾನ ಹಾಗೂ ಅಭಿವೃದ್ಧಿ ವಿಚಾರಗಳ ಬಗ್ಗೆ ಮಾತನಾಡಲಿ. ಅದನ್ನು ಬಿಟ್ಟು ವೈಯಕ್ತಿಕ ಆರೋಪ ಮತ್ತು ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

ರಾಜ್ಯದ ಯುವಜನತೆಗೆ ಯಾವ ರೀತಿಯ ಸಂದೇಶ ನೀಡುತ್ತಿದ್ದೇವೆ ಎಂಬುದನ್ನು ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಾರ್ವಜನಿಕ ಜೀವನದಲ್ಲಿರುವವರು ತಮ್ಮ ಸ್ಥಾನಮಾನದ ಘನತೆ ಮತ್ತು ಗೌರವವನ್ನು ಕಾಪಾಡಿಕೊಳ್ಳಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಮತದಿಂದ ಅಧಿಕಾರಕ್ಕೆ ಬಂದವರು ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳಬಾರದು ಎಂದು ನರೇಂದ್ರಸ್ವಾಮಿ ನುಡಿದರು.

Must Read