ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಷೇರು ಮಾರುಕಟ್ಟೆ ಭರ್ಜರಿಯಾಗಿ ಕಂಬ್ಯಾಕ್ ಮಾಡಿದ್ದು, ಹೂಡಿಕೆದಾರರಿಗೆ ಭರ್ಜರಿ ಲಾಭ ತಂದು ಕೊಟ್ಟಿದೆ. ಉತ್ತಮ ಜಾಗತಿಕ ಸೂಚನೆಗಳು ಮತ್ತು ಮಾರುಕಟ್ಟೆಯಲ್ಲಿ ಹೂಡಿಕೆದಾರರ ಭಾರೀ ಖರೀದಿಯಿಂದಾಗಿ ಬುಧವಾರ ಸೆನ್ಸೆಕ್ಸ್ 742 ಅಂಕ ಏರಿಕೆ ಕಂಡಿದ್ದು, 65,000 ಅಂಕಗಳ ಗಡಿ ದಾಟುವಲ್ಲಿ ಯಶಸ್ವಿಯಾಗಿದೆ.
ಮಾರುಕಟ್ಟೆಯಲ್ಲಿನ ಬುಧವಾರದ ಈ ಏರಿಕೆಗೆ ಬ್ಯಾಂಕಿಂಗ್, ಐಟಿ, ಎಫ್‌ಎಂಸಿಜಿ ಷೇರುಗಳಲ್ಲಿನ ಏರಿಕೆ ಪ್ರಮುಖ ಕಾರಣವಾಗಿವೆ. ವಹಿವಾಟಿನ ಅಂತ್ಯಕ್ಕೆ ಬಿಎಸ್‌ಇ ಸೆನ್ಸೆಕ್ಸ್ 742 ಅಂಕ ಅಥವಾ ಶೇ. 1.14ರಷ್ಟು ಏರಿಕೆ ಕಂಡು 65,675 ಅಂಕಗಳಲ್ಲಿ ವಹಿವಾಟು ಕೊನೆಗೊಳಿಸಿದರೆ, ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 50ಯು 232 ಅಂಕ ಅಥವಾ ಶೇ. 1.19ರಷ್ಟು ಜಿಗಿದು 19,675 ಅಂಕಗಳಲ್ಲಿ ಸ್ಥಿರವಾಯಿತು.
ಬುಧವಾರ ಐಟಿ, ಎಫ್ಎಂಸಿಜಿ, ಬ್ಯಾಂಕಿಂಗ್, ಎನರ್ಜಿ ಷೇರುಗಳಲ್ಲಿ ಗರಿಷ್ಠ ಏರಿಕೆ ಕಂಡುಬಂದರೆ, ಲೋಹ, ಫಾರ್ಮಾ, ಆಟೋ, ರಿಯಲ್ ಎಸ್ಟೇಟ್, ಮಾಧ್ಯಮ, ಆರೋಗ್ಯ, ತೈಲ ಮತ್ತು ಅನಿಲ, ಕನ್ಸೂಮರ್ ಡ್ಯುರೇಬಲ್ಸ್ ವಲಯಗಳ ಷೇರುಗಳಲ್ಲಿಯೂ ಭಾರೀ ಖರೀದಿ ಕಂಡುಬಂತು.
ನಿಫ್ಟಿ ಮಿಡ್ ಕ್ಯಾಪ್ ಷೇರುಗಳಲ್ಲಿ 400 ಅಂಕಗಳ ಏರಿಕೆ ಕಂಡುಬಂದರೆ ಸ್ಮಾಲ್ ಕ್ಯಾಪ್ ಸೂಚ್ಯಂಕದಲ್ಲಿ 180 ಅಂಕಗಳ ಗಳಿಕೆ ದಾಖಲಾಯಿತು. 30 ಸೆನ್ಸೆಕ್ಸ್ ಷೇರುಗಳ ಪೈಕಿ 27 ಷೇರುಗಳು ಲಾಭದೊಂದಿಗೆ ದಿನದ ವಹಿವಾಟು ಮುಗಿಸಿದರೆ, ಕೇವಲ 3 ಮಾತ್ರ ನಷ್ಟ ಅನುಭವಿಸಿದವು. ನಿಫ್ಟಿ 50 ಷೇರುಗಳಲ್ಲಿ 47 ಷೇರುಗಳು ಲಾಭದೊಂದಿಗೆ ಮತ್ತು ಮೂರು ನಷ್ಟದಲ್ಲಿ ಮುಕ್ತಾಯಗೊಂಡವು.
ಷೇರುಪೇಟೆಯಲ್ಲಿನ ಅದ್ಭುತ ಏರಿಕೆಯಿಂದಾಗಿ ಬುಧವಾರ ಹೂಡಿಕೆದಾರರ ಸಂಪತ್ತಿನಲ್ಲಿ ಬಲವಾದ ಏರಿಕೆ ಕಂಡುಬಂದಿದೆ. ಬಿಎಸ್‌ಇಯಲ್ಲಿ ಪಟ್ಟಿ ಮಾಡಲ್ಪಟ್ಟ ಕಂಪನಿಗಳ ಮಾರುಕಟ್ಟೆ ಬಂಡವಾಳವು 322.08 ಲಕ್ಷ ಕೋಟಿ ರೂ.ನಿಂದ 325.42 ಲಕ್ಷ ಕೋಟಿ ರೂ.ಗೆ ಏರಿಕೆ ಕಂಡಿದೆ. ಬುಧವಾರದ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು 3.34 ಲಕ್ಷ ಕೋಟಿ ರೂ.ಗಳಷ್ಟು ಏರಿಕೆಯಾಗಿದ್ದು, ಬಂಪರ್ ದೀಪಾವಳಿ ಗಿಫ್ಟ್ ಸಿಕ್ಕಿದೆ.