ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಲೋಕಾರ್ಪಣೆಗೊಂಡ ವಂದೇ ಭಾರತ್ ರೈಲಿಗೆ ಕಲ್ಲು ಎಸೆಯಲಾಗಿತ್ತು ಎಂಬ ಸುದ್ದಿಗೆ ಇದೀಗ ಈಶಾನ್ಯ ಗಡಿ ರೈಲ್ವೇ (NFR) ಸ್ಪಷ್ಟನೆ ನೀಡಿದ್ದು, ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ ನಡೆದಿಲ್ಲ ಇದು ವದಂತಿ ಎಂದು ತಿಳಿಸಿದೆ.
ಭಾನುವಾರ ಪಶ್ಚಿಮ ಬಂಗಾಳದ ಬೋಲ್ಪುರ್ ರೈಲು ನಿಲ್ದಾಣದ ಬಳಿ ರೈಲಿಗೆ ಕಲ್ಲು ಎಸೆಯಲಾಗಿತ್ತು ಎಂಬ ಸುದ್ದಿ ಹರಿದಾಡಿತ್ತು.
ಈ ಘಟನೆಯ ಬಳಿಕ ಪ್ರಾಥಮಿಕ ತನಿಖೆ ನಡೆಸಿರುವ ಎನ್‍ಎಫ್‍ಆರ್, ಗಾಜಿಗೆ ಕಲ್ಲು ಎಸೆದಿಲ್ಲ. ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಶಬ್ಧ ಕೇಳಿಸಿದೆ. ಆದರೆ ಗಾಜಿನ ಮೇಲಿರುವ ಬಿರುಕು ಕಲ್ಲು ಬಿದ್ದು ಆಗಿರುವ ಬಿರುಕು ಅಲ್ಲ. ಈ ಬಗ್ಗೆ ಸುಳ್ಳು ವದಂತಿಗಳನ್ನು ಹರಿಬಿಡಲಾಗಿದೆ ಎಂದು ತಿಳಿಸಿದೆ.
ಡಿಸೆಂಬರ್ 30 ರಂದು ಹೌರಾ ರೈಲು ನಿಲ್ದಾಣದಿಂದ ಪ್ರಾರಂಭಗೊಂಡ ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ಫ್ಲ್ಯಾಗ್-ಆಫ್ ಮಾಡಿದ್ದರು.