ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಪ್ರದೇಶದ ಸೋನ್ಭದ್ರ ಜಿಲ್ಲೆಯ ಬಿಲ್ಲಿ ಮರಕುಂಡಿಯಲ್ಲಿ ಕಲ್ಲಿನ ಕ್ವಾರಿ ಕುಸಿದು ಸಾವನ್ನಪ್ಪಿದವರ ಸಂಖ್ಯೆ ಮೂರಕ್ಕೆ ಏರಿದೆ. ಶನಿವಾರ (ನ. 15) ಸಂಭವಿಸಿದ ಈ ದುರಂತದಲ್ಲಿ ನಿನ್ನೆಯೇ ಒಬ್ಬರು ಸಾವನ್ನಪ್ಪಿರುವುದು ಖಚಿತಪಟ್ಟಿತ್ತು. ಇವತ್ತು ನಡೆದ ಶೋಧದಲ್ಲಿ ಇನ್ನೂ ಇಬ್ಬರ ಶವ ಸಿಕ್ಕಿದೆ.
ಕಲ್ಲಿನ ಅವಶೇಷಗಳಡಿಯಲ್ಲಿ ಒಂಬತ್ತು ಮಂದಿ ಈಗಲೂ ಸಿಲುಕಿದ್ದಾರೆ ಎನ್ನಲಾಗಿದೆ. ಆದರೆ, ದುರಂತ ಸಂಭವಿಸಿದಾಗ ಎಷ್ಟು ಮಂದಿ ಕೆಲಸಗಾರರು ಅಲ್ಲಿ ಇದ್ದರು ಎಂಬುದು ಗೊತ್ತಾಗಿಲ್ಲ.
ಉತ್ತರಪ್ರದೇಶ ಸಚಿವ ಸಂಜೀವ್ ಗೋಂಡ್ ಅವರು ನೀಡಿರುವ ಮಾಹಿತಿ ಪ್ರಕಾರ ಸುಮಾರು 12 ಮಂದಿ ಕೆಲಸಗಾರರು ದುರಂತ ಸ್ಥಳದಲ್ಲಿ ಇದ್ದರು.
ಅವಶೇಷಗಳಡಿ ಸಿಲುಕಿರುವ ಇತರ ಕಾರ್ಮಿಕರನ್ನು ರಕ್ಷಿಸಲು ಎನ್ಡಿಆರ್ಎಫ್ (ರಾಷ್ಟ್ರೀಯ ವಿಪತ್ತು ಸ್ಪಂದನೆ ಪಡೆ) ಮತ್ತು ಎಸ್ಡಿಆರ್ಎಫ್ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ. ಗುಡ್ಡದ ಮೇಲಿಂದ ಬಿದ್ದ ಕಲ್ಲುಗಳು ದೊಡ್ಡ ಗಾತ್ರದ್ದಾದ್ದರಿಂದ ಅವುಗಳನ್ನು ತೆರವುಗೊಳಿಸುವ ಕೆಲಸ ಕಷ್ಟವಾಗಿದೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ಬದ್ರಿನಾಥ್ ಸಿಂಗ್ ಅವರು ಘಟನೆಗೆ ಕಾರಣವೇನೆಂದು ಪತ್ತೆ ಮಾಡಲು ತನಿಖೆಗೆ ಆದೇಶಿಸಿದ್ದಾರೆ. ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿರುವ ವಾಗೀಶ್ ಸಿಂಗ್ ಅವರಿಗೆ ತನಿಖೆಯ ಜವಾಬ್ದಾರಿ ವಹಿಸಲಾಗಿದೆ. ಅವರು ಸಲ್ಲಿಸುವ ವರದಿಯಲ್ಲಿನ ಅಂಶಗಳನ್ನು ಆಧರಿಸಿ ಕ್ರಮ ತೆಗೆದುಕೊಳ್ಳಲಾಗುತ್ತದೆ.

