May 20, 2026
Wednesday, May 20, 2026
spot_img

ಭಯ ಬಿಡಿ, ಅಭಿವೃದ್ಧಿಗಾಗಿ ಮತ ನೀಡಿ: ಬಂಗಾಳದ ಜನತೆಗೆ ಪ್ರಧಾನಿ ಮೋದಿ ಬಹಿರಂಗ ಪತ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಅಂತಿಮ ಹಂತದ ಪ್ರಚಾರ ಕಾರ್ಯ ಮುಕ್ತಾಯಗೊಂಡ ಬೆನ್ನಲ್ಲೇ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಜ್ಯದ ಜನತೆಗೆ ವಿಶೇಷ ಪತ್ರ ಬರೆದು ‘ವಿಕಸಿತ ಬಂಗಾಳ’ದ ಕನಸನ್ನು ಹಂಚಿಕೊಂಡಿದ್ದಾರೆ.

ಪಶ್ಚಿಮ ಬಂಗಾಳದ ಜನತೆ ಹಲವು ವರ್ಷಗಳಿಂದ ಭಯ ಮತ್ತು ಆತಂಕದ ನೆರಳಿನಲ್ಲಿ ಬದುಕುತ್ತಿದ್ದಾರೆ ಎಂದು ಪತ್ರದಲ್ಲಿ ವಿಷಾದಿಸಿರುವ ಪ್ರಧಾನಿ, ಈಗ ಜನರು ಬದಲಾವಣೆ ಮತ್ತು ನೈಜ ಅಭಿವೃದ್ಧಿಯನ್ನು ಬಯಸುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ವಿಶೇಷವಾಗಿ ರಾಜ್ಯದ ಯುವಶಕ್ತಿ, ಮಹಿಳೆಯರು, ರೈತರು ಮತ್ತು ಕಾರ್ಮಿಕ ವರ್ಗವು ಹೊಸ ಆಶಾವಾದದೊಂದಿಗೆ ಬಿಜೆಪಿಯತ್ತ ಮುಖ ಮಾಡಿದೆ ಎಂಬ ಅಂಶವನ್ನು ಅವರು ಪತ್ರದಲ್ಲಿ ಒತ್ತಿ ಹೇಳಿದ್ದಾರೆ.

ತೃಣಮೂಲ ಕಾಂಗ್ರೆಸ್ ಆಡಳಿತದ ಅಡಿಯಲ್ಲಿ ರಾಜ್ಯದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇದರಿಂದಾಗಿ ಜನರು ಉತ್ತಮ ಉದ್ಯೋಗಾವಕಾಶಗಳು, ಭದ್ರತೆ ಮತ್ತು ಪ್ರಗತಿಯಿಂದ ವಂಚಿತರಾಗಿದ್ದಾರೆ. ಬಂಗಾಳದ ಹೆಣ್ಣುಮಕ್ಕಳು ಇಂದು ಗೌರವ ಮತ್ತು ಸುರಕ್ಷಿತ ಜೀವನಕ್ಕಾಗಿ ಹಂಬಲಿಸುತ್ತಿದ್ದಾರೆ. ಯುವಜನತೆಗೆ ಮುಕ್ತವಾಗಿ ಬೆಳೆಯುವ ಅವಕಾಶಗಳ ಅಗತ್ಯವಿದೆ ಎಂದು ಮೋದಿ ವಿವರಿಸಿದ್ದಾರೆ.

“ಬಂಗಾಳದ ಪ್ರತಿಯೊಂದು ಕುಟುಂಬವೂ ಈಗ ಅಭಿವೃದ್ಧಿಯ ಹಾದಿಯಲ್ಲಿ ಸಾಗಲು ನಿರ್ಧರಿಸಿದೆ. ದಶಕಗಳ ಕಾಲ ಅನುಭವಿಸಿದ ಭಯದ ಬದುಕು ಸಾಕು, ಈಗ ನಮಗೆ ಪರಸ್ಪರ ನಂಬಿಕೆ ಮತ್ತು ಬಿಜೆಪಿಯ ಆಡಳಿತದ ಅಗತ್ಯವಿದೆ,” ಎಂದು ಮೋದಿ ಪತ್ರದ ಮೂಲಕ ಜನರಲ್ಲಿ ಮನವಿ ಮಾಡಿದ್ದಾರೆ. ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಜನರ ಸುರಕ್ಷತೆ ಮತ್ತು ಪ್ರಗತಿಗೆ ತಾನು ಬದ್ಧನಾಗಿರುವುದಾಗಿ ಅವರು ಭರವಸೆ ನೀಡಿದ್ದಾರೆ.

ಪಶ್ಚಿಮ ಬಂಗಾಳದ ಅಂತಿಮ ಹಂತದ ಮತದಾನದ ಮೇಲೆ ಈ ಪತ್ರವು ದೊಡ್ಡ ಮಟ್ಟದ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !