June 25, 2026
Thursday, June 25, 2026
spot_img

ಮಧ್ಯವರ್ತಿಗಳ ಹಸ್ತಕ್ಷೇಪಕ್ಕೆ ಬ್ರೇಕ್; ರೈತರಿಂದ ನೇರ ಖರೀದಿಗೆ ನಾಫೆಡ್, ಎನ್‌ಸಿಸಿಎಫ್‌ಗೆ ಅಮಿತ್ ಶಾ ಆದೇಶ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದೇಶದ ರೈತರ ಆದಾಯವನ್ನು ಹೆಚ್ಚಿಸುವ ಮತ್ತು ಕೃಷಿ ವಲಯದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ರೈತರು ಬೆಳೆದ ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳನ್ನು ಯಾವುದೇ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ, ಕನಿಷ್ಠ ಬೆಂಬಲ ಬೆಲೆಯಲ್ಲಿ ನೇರವಾಗಿ ರೈತರಿಂದಲೇ ಖರೀದಿಸಲು ವ್ಯವಸ್ಥೆ ರೂಪಿಸಬೇಕು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಆದೇಶಿಸಿದ್ದಾರೆ.‌

ನವದೆಹಲಿಯಲ್ಲಿ ನಡೆದ ನಾಫೆಡ್ ಮತ್ತು ಎನ್‌ಸಿಸಿಎಫ್ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಸಂಪೂರ್ಣ ಪ್ರಕ್ರಿಯೆಯನ್ನು ಜಾರಿಗೆ ತರಲು 2 ವರ್ಷಗಳ ಕಟ್ಟುನಿಟ್ಟಿನ ಗಡುವು ವಿಧಿಸಿದ್ದಾರೆ.

ಡಿಜಿಟಲ್ ವೇದಿಕೆಗಳ ಲೋಕಾರ್ಪಣೆ:

ಖರೀದಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ನವೀಕರಿಸಲು ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಸಚಿವರು ಎರಡು ಪ್ರಮುಖ ಡಿಜಿಟಲ್ ವ್ಯವಸ್ಥೆಗಳನ್ನು ಉದ್ಘಾಟಿಸಿದ್ದಾರೆ.

‘NAFEX.in’ ಡಿಜಿಟಲ್ ಹರಾಜು ವೇದಿಕೆ. ಇದು ಕೃಷಿ ಉತ್ಪನ್ನಗಳ ಮಾರಾಟ ಮತ್ತು ಖರೀದಿಯಲ್ಲಿ ಪಾರದರ್ಶಕತೆ ತರಲು ಸಹಕಾರಿಯಾಗಲಿದೆ.

‘ದೃಷ್ಟಿ’ (Drishti) ಪೋರ್ಟಲ್. ನಾಫೆಡ್‌ನ ಆಡಳಿತಾತ್ಮಕ ಕಾರ್ಯಕ್ಷಮತೆ ಮತ್ತು ದಾಸ್ತಾನುಗಳನ್ನು ಡಿಜಿಟಲೀಕರಣಗೊಳಿಸಲು ಇದನ್ನು ಜಾರಿಗೆ ತರಲಾಗಿದೆ.

ಇದನ್ನೂ ಓದಿ:

ಪ್ರಮುಖ ಮಾರ್ಗಸೂಚಿಗಳು:

ರೈತರಿಂದ ಉತ್ಪನ್ನಗಳನ್ನು ಖರೀದಿಸಿದ ತಕ್ಷಣ, ಕನಿಷ್ಠ ಬೆಂಬಲ ಬೆಲೆಯ ಸಂಪೂರ್ಣ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬೇಕು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕವೇ ನೇರ ಖರೀದಿ ನಡೆಯಬೇಕು. ಯಾವುದೇ ಕಾರಣಕ್ಕೂ ದಲ್ಲಾಳಿಗಳಿಗೆ ಆಸ್ಪದ ನೀಡಬಾರದು.

ದೇಶದಾದ್ಯಂತ ದಾಸ್ತಾನು ಕೊರತೆಯನ್ನು ನೀಗಿಸಲು ವೈಜ್ಞಾನಿಕ ಗೋದಾಮುಗಳು ಮತ್ತು ಶೀತಲಗೃಹಗಳ ಜಾಲವನ್ನು ವಿಸ್ತರಿಸಲು ನಾಫೆಡ್ ಹಾಗೂ ಎನ್‌ಸಿಸಿಎಫ್ ಮುಂದಾಗಬೇಕು ಎಂದು ಶಾ ತಿಳಿಸಿದ್ದಾರೆ.

ಈ ಹೊಸ ವ್ಯವಸ್ಥೆಯಿಂದಾಗಿ ದೇಶದ ಲಕ್ಷಾಂತರ ರೈತರಿಗೆ ತಾವೇ ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ ಸಿಗಲಿದ್ದು, ಮಾರುಕಟ್ಟೆಯಲ್ಲಿನ ಶೋಷಣೆಗೆ ಮುಕ್ತಿ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !