ಹೊಸದಿಗಂತ ವರದಿ, ಮೈಸೂರು:
ಕಡಿಮೆ ವೆಚ್ಚದಲ್ಲಿ ಬಡವರಿಗೆ ಸೂರು ದೊರಕಿಸಿಕೊಡಲೆಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಪಾರ್ಟ್ಮೆಂಟ್ ನಿರ್ಮಿಸಿಕೊಡುವುದಕ್ಕೆ ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಮುಂದಾಗಿದ್ದೆ, ಆದರೆ ನನ್ನ ಜೊತೆಯಲ್ಲಿಯೇ ಇದ್ದ ಕೆಲವರು ಹುನ್ನಾರ ನಡೆಸಿ, ಅದನ್ನು ನಿಲ್ಲಿಸಿಬಿಟ್ಟಿದ್ದಾರೆ ಎಂದು ಮೈಸೂರು ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಬುಧವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಜಿಲ್ಲಾ ಪತ್ರಕರ್ತರ ಸಂಘದಿoದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಪ್ರಶಸ್ತಿಗಳನ್ನು ಪಡೆದ ಪತ್ರಕರ್ತರನ್ನು ಸನ್ಮಾನಿಸಿ ಮಾತನಾಡಿದ ಅವರು,ಅಪಾರ್ಟ್ಮೆಂಟ್ ಸಂಸ್ಕೃತಿ ಮೈಸೂರಿಗೆ ತರುವುದು ಬೇಡಾ ಎಂದು ನನ್ನ ಜೊತೆಯಲ್ಲಿಯೇ ಇದ್ದ ಕೆಲವರು ಮುಡಾದಿಂದ ಅಪಾರ್ಟ್ಮೆಂಟ್ಗಳ ನಿರ್ಮಾಣ ಮಾಡುವ ಕಾರ್ಯವನ್ನು ತಡೆಯಲು ಹುನ್ನಾರ ನಡೆಸಿದರು.
ಅದು ಗೊತ್ತಾಗುವ ವೇಳೆಗೆ ಕಾಲ ಮಿಂಚಿ ಹೋಗಿತ್ತು. ಅವರ ಹುನ್ನಾರದಿಂದ ಮಧ್ಯಮವರ್ಗದವರು, ಬಡವರಿಗೆ ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡಬೇಕೆಂಬ ನಮ್ಮ ಪ್ರಯತ್ನ ಸಫಲವಾಗಲಿಲ್ಲ. ಈಗ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ, ಈ ಹಿಂದೆ ಮುಡಾದಿಂದ ಏನೆಲ್ಲಾ ಕೆಲಸ, ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿತ್ತೋ, ಏನೆಲ್ಲಾ ನಿರ್ಣಯಗಳನ್ನು ಕೈಗೊಳ್ಳಲಾಗಿತ್ತೋ, ಅದಕ್ಕೆಲ್ಲಾ ತಡೆಯೊಡ್ಡಿದ್ದಾರೆ. ಸಿಎ ನಿವೇಶಗಳನ್ನೂ ಈಗ ಮಾರಾಟ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ದತ್ತಿ ನಿಧಿಗೆ 50 ಸಾವಿರ ರೂ ನೀಡಿದ್ದೆ. ಈಗ ಮತ್ತೆ ಒಂದು ಲಕ್ಷರೂಗಳನ್ನು ನೀಡುವುದಾಗಿ ಪ್ರಕಟಿಸಿದರು. ಸನ್ಮಾನ ಸ್ವೀಕರಿಸಿದ ಪತ್ರಿಕೋದ್ಯಮಿ ಡಾ.ಕೆ.ಬಿ. ಗಣಪತಿ ಮಾತನಾಡಿ, ಪತ್ರಿಕೋದ್ಯಮ ಒಂದು ರೀತಿ ವ್ಯಾಪಾರ ವ್ಯವಹಾರ ಚಿಂತನೆ ಒಳಗೊಂಡಿದ್ದರೂ ಪತ್ರಕರ್ತನಾಗಿ ಕೆಲಸ ವಾಡುವುದ ಕಷ್ಟದ ಕೆಲಸವಾಗಿದೆ. ಪತ್ರಕರ್ತರ ಕೆಲಸ ಸವಾಜದ ಶಾಂತಿಗೆ ಭಂಗತರದoತೆ ಇರಬೇಕು. ಆತ ಓದುಗರ ಕಣ್ಣು, ಕಿವಿ ಆಗಿರಬೇಕು. ಹೀಗಾಗಿ ನೋಡುವುದೇ ಬೇರೆ, ಬರೆಯುವುದೇ ಬೇರೆ ಎಂದಾಗ ಯಾರ ಮನಸ್ಸಿಗೂ ಸಂತಸವುoಟಾಗುವುದಿಲ್ಲ. ಇನ್ನು, ಎಲ್ಲರೂ ರಾಜಧರ್ಮ ಪಾಲಿಸಬೇಕೆನ್ನುತ್ತಾರೆ. ಆದರೆ ರಾಜನೂ ಇಲ್ಲ,ಧರ್ಮವು ಅಲ್ಲ. ಬದಲಾಗಿ ಸಂವಿಧಾನ ಧರ್ಮವಿದೆ. ಅದನ್ನು ಅನುಸರಿಸದಿದ್ದರೆ ಸಮಾಜದಲ್ಲಿ ಅಶಾಂತಿಯುoಟಾಗುತ್ತದೆ. ಜೊತೆಗೆ ಸಂವಿಧಾನ ಧರ್ಮ ಪಾಲಿಸುವುದರ ಜೊತೆಗೆ ಸಮಾಜದ ಹಿತ ಪತ್ರಕರ್ತನಿಗೆ ಮುಖ್ಯವಾದಾಗ ಮಾತ್ರ ಒಳ್ಳೆಯ ಪತ್ರಕರ್ತನಾಗಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಮುಡಾ ಮಾಜಿ ಅಧ್ಯಕ್ಷ ಹೆಚ್.ವಿ.ರಾಜೀವ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಮತ್ತಿತರರು ಉಪಸ್ಥಿತರಿದ್ದರು.