ದಿನಾ ಅದೇ ದೋಸೆ, ಇಡ್ಲಿ ತಿಂದಿ ಬೋರ್ ಆಗಿದ್ರೆ, ದಿಢೀರ್ ಅಂತ ಹತ್ತೇ ಹತ್ತು ನಿಮಿಷದಲ್ಲಿ ಸೂಪರ್ ಆಗಿ ಮಾಡಬಹುದಾದ ತಿಂಡಿ ಅಂದ್ರೆ ಅದುವೇ ಶಾವಿಗೆ ಉಪ್ಪಿಟ್ಟು.
ಶಾವಿಗೆ
ಈರುಳ್ಳಿ
ಟೊಮೆಟೊ
ಹಸಿಮೆಣಸಿನಕಾಯಿ
ಸಾಸಿವೆ & ಉದ್ದಿನಬೇಳೆ
ಕಡಲೆಬೇಳೆ & ಶೇಂಗಾ
ತರಕಾರಿಗಳು: ಕ್ಯಾರೆಟ್, ಬೀನ್ಸ್, ಹಸಿ ಬಟಾಣಿ
ಕರಿಬೇವು & ಕೊತ್ತಂಬರಿ ಸೊಪ್ಪು
ಸಾಂಬಾರ್ ಪುಡಿ
ತೆಂಗಿನಕಾಯಿ ತುರಿ
ನಿಂಬೆಹಣ್ಣಿನ ರಸ
ಅಡುಗೆ ಎಣ್ಣೆ ಮತ್ತು ಉಪ್ಪು
ಮೊದಲು ಬಾಣಲೆಗೆ ಒಂದು ಚಮಚ ಅಡುಗೆ ಎಣ್ಣೆ ಹಾಕಿ, ಶಾವಿಗೆಯನ್ನು ಸಣ್ಣ ಉರಿಯಲ್ಲಿ ಲೈಟಾಗಿ ಹೊಂಬಣ್ಣ ಬರುವವರೆಗೆ ಹುರಿದು ಪಕ್ಕಕ್ಕೆ ಎತ್ತಿಟ್ಟುಕೊಳ್ಳಿ. ಈಗ ಅದೇ ಬಾಣಲೆಗೆ 2-3 ಚಮಚ ಎಣ್ಣೆ ಹಾಕಿ ಕಾಯಿಸಿ. ಸಾಸಿವೆ, ಉದ್ದಿನಬೇಳೆ, ಕಡಲೆಬೇಳೆ ಮತ್ತು ಶೇಂಗಾ ಹಾಕಿ ಚೆನ್ನಾಗಿ ಹುರಿಯಿರಿ. ಆಮೇಲೆ ಜಜ್ಜಿದ ಶುಂಠಿ, ಹಸಿಮೆಣಸಿನಕಾಯಿ ಹಾಗೂ ಕರಿಬೇವು ಹಾಕಿ ಒಗ್ಗರಣೆ ಮಾಡಿ. ನಂತರ ಹೆಚ್ಚಿದ ಈರುಳ್ಳಿ ಹಾಕಿ, ಹುರಿಯಿರಿ. ಈಗ ಸಣ್ಣಗೆ ಹೆಚ್ಚಿದ ತರಕಾರಿಗಳು ಮತ್ತು ಟೊಮೆಟೊ ಹಾಕಿ 2 ನಿಮಿಷ ಬೇಯಿಸಿ.
ತರಕಾರಿಗಳು ಬೆಂದಮೇಲೆ 3.5 ಕಪ್ ನೀರು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅರ್ಧ ಚಮಚ ಸಾಂಬಾರ್ ಪುಡಿ ಹಾಕಿ ಚೆನ್ನಾಗಿ ಕುದಿಸಿ. ನೀರು ಕುದಿ ಬಂದಮೇಲೆ ಉರಿಯನ್ನು ಪೂರ್ತಿ ಕಮ್ಮಿ ಮಾಡಿ, ಹುರಿದಿಟ್ಟ ಶಾವಿಗೆಯನ್ನು ಸ್ವಲ್ಪ ಸ್ವಲ್ಪವೇ ಹಾಕುತ್ತಾ ಕೈಯಾಡಿಸಿ.
ಈಗ ಬಾಣಲೆಗೆ ಮುಚ್ಚಳ ಮುಚ್ಚಿ 3 ರಿಂದ 4 ನಿಮಿಷ ಸಣ್ಣ ಉರಿಯಲ್ಲಿ ಬೇಯಲು ಬಿಡಿ. ನಂತರ ಮುಚ್ಚಳ ತೆಗೆದು, ಮೇಲೆ ತೆಂಗಿನಕಾಯಿ ತುರಿ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ. 2 ನಿಮಿಷ ಹಾಗೆಯೇ ಮುಚ್ಚಿಟ್ಟರೆ ಶಾವಿಗೆ ಹಬೆಯಲ್ಲೇ ಚೆನ್ನಾಗಿ ಬಿಡಿಬಿಡಿಯಾಗಿ ಸಾಫ್ಟ್ ಆಗುತ್ತೆ. ಈಗ ಬಿಸಿಬಿಸಿ ಶಾವಿಗೆ ಉಪ್ಪಿಟ್ಟು ಸವಿಯಲು ಸಿದ್ಧ!



