ಹೊಸ ದಿಗಂತ ವರದಿ, ಅಂಕೋಲಾ :
ಗ್ರಾಮ ವಾಸ್ತವ್ಯದ ಹಿನ್ನೆಲೆಯಲ್ಲಿ ಕಂದಾಯ ಮಂತ್ರಿ ಆರ್. ಅಶೋಕ ಅವರು ಶುಕ್ರವಾರ ಅಚವೆ ಗ್ರಾ.ಪಂ ವ್ಯಾಪ್ತಿಯ ಅಂಗಡಿಬೈಲ್ ನ ಸಿದ್ದಿ ಸಮುದಾಯದ ಸುಬ್ರಾಯ ಸಿದ್ದಿ ಮನೆಗೆ ಭೇಟಿ ನೀಡಿ ವಿವಿಧ ಚಟುವಟಿಕೆಯಲ್ಲಿ ಪಾಲ್ಗೊಂಡರು.
ಸಚಿವರನ್ನು ಸಿದ್ದಿ ಸಮುದಾಯದ ಫುಗಡಿ ನೃತ್ಯ, ಹಾಲಕ್ಕಿಗಳ ತರ್ಲೆ ಹಾಡಿನ ಮೂಲಕ ಸ್ವಾಗತಿಸಲಾಯಿತು.ಹಾಡಿನ ತಂಡದೊಂದಿಗೆ ಸಚಿವರು ಸಂಭ್ರಮಿಸಿದರು. ನಂತರ ಇಲ್ಲಿಯ ಅಡಕೆ ತೋಟದಲ್ಲಿ ಅಡಕೆ ಕುಯ್ಲು ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದ ಸಚಿವರು , ಅಲ್ಲೇ ಆಲೆಮನೆ ವೀಕ್ಷಣೆ ಮಾಡಿದರು.
ಸ್ಥಳದಲ್ಲೇ ನೌಕರಿ:
ಸುಬ್ರಾಯ ಸಿದ್ದಿ ಮನೆ ವೀಕ್ಷಣೆ ನಡೆಸಿದ ಅವರು, ಎಂ.ಎಸ್.ಡಬ್ಲೂ ಕಲಿತ ಸುಬ್ರಾಯ ಸಿದ್ದಿ ಮಗಳು ಭಾಗಿರಥಿ ಸಿದ್ದಿ ಗೆ ಸ್ಥಳದಲ್ಲೇ ಗ್ರಾಮ ಸಹಾಯಕಿ ಹುದ್ದೆ ಮಂಜೂರು ಮಾಡಿದರು.
ನಂತರ ಮಾತನಾಡಿದ ಅವರು ಸಿದ್ದಿ, ಹಾಲಕ್ಕಿಯಂತಹ ಬಡ, ಹಿಂದುಳಿದ ಸಮುದಾಯದವರು ಕಲೆ, ಸಂಪ್ರದಾಯವನ್ನು ಉಳಿಸಿಕೊಂಡು ಬಂದಿದ್ದು, ಇಂಥವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನವೇ ಗ್ರಾಮವಾಸ್ತವ್ಯ ಎಂದರು.
ಜಿಲ್ಲಾ ಮಂತ್ರಿ ಕೋಟ ಶ್ರೀನಿವಾಸ ಪೂಜಾರಿ, ಶಾಸಕಿ ರೂಪಾಲಿ ನಾಯ್ಕ, ವಿ.ಪ. ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿದರು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಸಿಇಓ ಪ್ರಿಯಾಂಕ ಎಂ., ಎಸಿ ರಾಹುಲ್ ಪಾಂಡೆ, ಗ್ರಾ.ಪಂ ಅಧ್ಯಕ್ಷ ಬಾಬು ಸುಂಕೇರಿ, ಜಿ.ಪ ಮಾಜಿ ಸದಸ್ಯ ಜಗದೀಶ ನಾಯಕ ಮತ್ತಿತರರು ಇದ್ದರು.
ವಿವಿಧ ಸಿದ್ದಿ ಪ್ರತಿಭಾವಂತರಿಗೆ ಲ್ಯಾಪಟಾಪ್ ವಿತರಿಸಿದರು. ಸಿದ್ದಿಗಳಿಗೆ ಜನಪದ ಪರಿಕರ ಖರೀದಿಗೆ ನೆರವು ನೀಡಿದರು.