ಹೊಸದಿಗಂತ ವರದಿ ಉತ್ತರಕನ್ನಡ :
ಅಂಕೋಲಾ ತಾಲೂಕಿನಲ್ಲಿ ಎರಡು ದಿನಗಳ ಕಾಲ ಬಿರುಗಾಳಿ ಮನೆಯಿಂದ ಹಲವಾರು ಕಡೆಗಳಲ್ಲಿ ಮರಗಳು ಮುರಿದು ಬಿದ್ದು ನೂರಾರು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು ಲಕ್ಷಾಂತರ ರೂಪಾಯಿಗಳ ಹಾನಿ ಸಂಭವಿಸಿದೆ.
ಸೋಮವಾರ ಸಂಜೆಯ ವರೆಗಿನ ವರದಿಯ ಪ್ರಕಾರ ತಾಲೂಕಿನಲ್ಲಿ ಒಟ್ಟು 128 ವಿದ್ಯುತ್ ಕಂಬಗಳು ತುಂಡಾಗಿದ್ದು ಸುಮಾರು 23 ಲಕ್ಷ ರೂಪಾಯಿಗಳ ಹಾನಿ ಸಂಭವಿಸಿದೆ. ಬಿರುಗಾಳಿಯಿಂದ ಮರಗಳು ಉರುಳಿ ರಾಮನಗುಳಿ ಡೋಂಗ್ರಿ ವ್ಯಾಪ್ತಿಯಲ್ಲಿ 18 ಕಂಬಗಳು, ಅಚವೆ ವ್ಯಾಪ್ತಿಯಲ್ಲಿ 14 ಕಂಬಗಳು, ಹಿಲ್ಲೂರು17, ಸುಂಕಸಾಳ 15,ಅಗಸೂರು8, ಮೊಗಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಬ್ರಹ್ಮೂರಿನಲ್ಲಿ 12, ಮಕ್ಕಿಗದ್ದೆ 19, ಹಾರವಾಡ 5, ಸಕಲಬೇಣ 2,ಕಾಸಿನಗದ್ದೆ 7, ಜೂಗ 11 ಕಂಬಗಳು ತುಂಡಾಗಿವೆ.
ಇದರಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹಲವಡೆ ವಿದ್ಯುತ್ ಪೂರೈಕೆಯಲ್ಧೆ ವ್ಯತ್ಯಯ ಉಂಟಾಗಿದ್ದು ಹೆಸ್ಕಾಂ ಸಿಬ್ಬಂದಿಗಳು ದುರುಸ್ಥಿ ಕಾರ್ಯಕ್ಕೆ ಶ್ರಮಿಸುತ್ತಿದ್ದಾರೆ.
ಬಾಳೆಗುಳಿಯಿಂದ ರಾಮನಗುಳಿ ವರೆಗೆ ರಾಷ್ಟ್ರೀಯ ಹೆದ್ದಾರಿ 52 ರ ರಸ್ತೆ ಪಕ್ಕದಲ್ಲಿರುವ ಮರಗಳು ತುಂಡಾಗಿ ಬೀಳುತ್ತಿದ್ದು ಆಗಾಗ ರಸ್ತೆ ಸಂಚಾರಕ್ಕೆ ಅಡ್ಡಿಯಾದರೂ ಸಮರೋಪಾದಿಯಲ್ಲಿ ರಸ್ತೆಗೆ ಬಿದ್ದ ಮರಗಳನ್ನು ತೆರುವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುತ್ತಿದೆ, ಟ್ಯಾಕ್ಟರುಗಳಲ್ಲಿ ಕಂಬಗಳನ್ನು ಹೊತ್ತು ಹಗಲು ರಾತ್ರಿ ಶ್ರಮಿಸುತ್ತಿರುವ ವಿದ್ಯುತ್ ಇಲಾಖೆಯ ಸಿಬ್ಬಂದಿಗಳ ಸ್ಪಂದನೆಗೆ ಮೆಚ್ಚುಗೆ ವ್ಯಕ್ತವಾಗಿದೆ.



