ಜೀವನವು ಏಳುಬೀಳುಗಳು, ನೋವು, ಸಂಕಟ, ಗೆಲುವು ಮತ್ತು ಸೋಲುಗಳ ಕಥೆಯಾಗಿದೆ. ಸಿಹಿ ಕಹಿ ನೆನಪುಗಳೊಂದಿಗೆ ಅನುಭವಗಳ ಮಹಾಸಾಗರದಲ್ಲಿ ಈಜುತ್ತಾ ತಪ್ಪುಗಳನ್ನು ತಿದ್ದಿಕೊಂಡು ಸರಿದಾರಿಯಲ್ಲಿ ಸಾಗುವುದೇ ನಿಜ ಜೀವನ.
ನಾವು ಅಂದುಕೊಂಡಂತೆ ಈ ಜೀವನ ಖಂಡಿತಾ ಇರುವುದಿಲ್ಲ, ಆದರೆ ನಮ್ಮ ಉತ್ತಮ ಜೀವನದ ಸಾರಥಿ ನಾವೇ ಆಗಿರುತ್ತೇವೆ. ಕೆಲವೊಮ್ಮೆ ನಾವು ಸಂತೋಷದ ಹುಡುಕಾಟದಲ್ಲಿ ಅಲೆದಾಡಬೇಕಾಗಬಹುದು, ಕೆಲವೊಮ್ಮೆ ತುತ್ತು ಅನ್ನಕ್ಕಾಗಿ ಅಲೆದಾಡಬೇಕಾಗಬಹುದು. ಜೀವನವು ಒಂದು ಮಾಯಾ ಪ್ರಪಂಚದಂತೆ. ಇಲ್ಲಿ ವಾಸಿಸುವ ಪ್ರತಿಯೊಬ್ಬರೂ ನಾಳೆ ಹೇಗಿರುತ್ತಾರೆ ಎಂಬುದು ನಿಗೂಢ. ಇಂದು ಯಾರು ಅತಿಯಾಗಿ ಕಷ್ಟ, ನೋವು ಅನುಭವಿಸುತ್ತಿರುತ್ತಾರೋ, ನಾಳೆ ಅವರ ಬದುಕು ಯಶಸ್ಸು, ಸಂತೋಷ, ಶ್ರೀಮಂತಿಕೆಯಿಂದ ಕೂಡಿರುತ್ತದೆ. ಈ ಮಾಯಾ ಪ್ರಪಂಚದಲ್ಲಿ ಅಸಾಧ್ಯ ಅನ್ನೋದು ಯಾವುದು ಇಲ್ಲ ಇಲ್ಲಿ ಎಲ್ಲವೂ ಸಾಧ್ಯ.
ನಾವು ಇತರರ ತಾಳಕ್ಕೆ ತಕ್ಕಂತೆ ಕುಣಿಯಬಾರದು. ಅವರ ಮಾತಿನಿಂದಾಗಲೀ, ವ್ಯಂಗ್ಯದಿಂದಾಗಲೀ ಪ್ರಭಾವಿತರಾಗದೆ ಮುನ್ನಡೆಯಬೇಕು. ಅವರ ಮಾತಿನಿಂದ ಮನನೊಂದಿದ್ದರೆ ನಮಗೆ ಗೆಲುವು ಸಿಗುವುದಿಲ್ಲ. ನೀವು ಏನನ್ನೂ ಮಾಡದೆ ಕುಳಿತರೆ, ನಿಮ್ಮ ಜೀವನ ಚಕ್ರವು ನಿಂತಲ್ಲೇ ನಿಂತು ತುಕ್ಕು ಹಿಡಿಯಬಹುದು. ಯಾರೂ ನಿಮ್ಮ ಸಹಾಯಕ್ಕೆ ಬರುವುದಿಲ್ಲ, ಯಾರೂ ನಿಮ್ಮ ಬಗ್ಗೆ ಸಹಾನುಭೂತಿ ತೋರಿಸುವುದಿಲ್ಲ. ಆತುರದ ನಿರ್ಧಾರಗಳು ದೊಡ್ಡ ಅನಾಹುತಗಳಿಗೆ ಕಾರಣವಾಗಬಹುದು.
ಮನುಷ್ಯನ ಜನ್ಮವನ್ನು ಸೃಷ್ಟಿಯ ಶ್ರೇಷ್ಠಜನ್ಮ ಎನ್ನುತ್ತಾರೆ. ಇಲ್ಲಿ ನಮಗೆ ಅನೇಕ ಸಾಧಕರ ವಿಚಾರಗಳು ತಿಳಿದಿದೆ. ಅಂತಹ ಸಾಧಕರ ಜೀವನ ಹೂವಿನ ದಾರಿ ಆಗಿರಲಿಲ್ಲ. ಬಹಳ ಕಷ್ಟ, ಏಳು ಬೀಳುಗಳನ್ನು ಎದುರಿಸಿದ ನಂತರ ಸಾಧಕರ ಸಾಲಿನಲ್ಲಿ ಸೇರಿದ ಮಹಾನ್ ಪ್ರತಿಭೆಗಳು. ನಮ್ಮ ಜೀವನದಲ್ಲಿ ನಾವು ಅನುಭವಿಸುವ ನೋವಿಗೆ ಒಂದಲ್ಲ ಒಂದು ದಿನ ಫಲ ಸಿಗಲೇ ಬೇಕು. ಆದರೆ ಅಲ್ಲಿಯವರೆಗೂ ನಿಮ್ಮ ಪ್ರಯತ್ನ, ಛಲ, ಗುರಿಯನ್ನು ಎಂದಿಗೂ ಮರೆಯಬೇಡಿ. ನಮ್ಮ ಜೀವನದ ಸಾರಥಿ ನಾವೇ ಆಗಿರುವಾಗ ಹಠ, ಭರವಸೆ, ನಂಬಿಕೆ ಅನ್ನೋ ರಥವನ್ನ ಗುರಿಯತ್ತ ತಲುಪಿಸುವುದು ನಮ್ಮದೇ ಜವಾಬ್ದಾರಿಯಾಗಿದೆ ನೆನಪಿರಲಿ.