ಸಮಾಜದ ಶಾಂತಿ ಕದಡುವ ಗೂಂಡಾಗಳ ವಿರುದ್ಧ ಕಠಿಣ ಕ್ರಮ: ಬಿ.ಸಿ.ಪಾಟೀಲ್ ಎಚ್ಚರಿಕೆ

ಹೊಸದಿಗಂತ ವರದಿ, ಮೈಸೂರು
ರಾಜ್ಯದಲ್ಲಿ ಶಾಂತಿ ಭಂಗವುಂಟಾಗಿಲ್ಲ, ಆದರೆ ಶಾಂತಿಯನ್ನು ಕೆಡಿಸಲು ಕೆಲವು ಕಿಡಿಗೇಡಿಗಳು ಪ್ರಯತ್ನಿಸುತ್ತಿದ್ದಾರೆ. ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಶುಕ್ರವಾರ ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,
ಹುಬ್ಬಳ್ಳಿಯಲ್ಲಿ ಗಲಭೆ ಎಬ್ಬಿಸಿ, ಶಾಂತಿ ಭಂಗ ಮಾಡಲು ಕೆಲವರು ಪ್ರಯತ್ನಿಸಿದರು. ಆದರೆ ಪೊಲೀಸರು ಗಲಭೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ವಿವಾದತ್ಮಕ ಪೋಸ್ಟ್ ಹಾಕಿದ್ದವನನ್ನು ಬಂಧಿಸಲಾಗಿದೆ. ಆದರೆ ಆತನನ್ನು ತಮ್ಮ ವಶಕ್ಕೆ ಕೊಡಬೇಕೆಂದು ಸಾವಿರಾರು ಜನರು ಸೇರಿ ಗೊಂಡಾಗಳಂತೆ ವರ್ತಿಸಿದ್ದಾರೆ. ಆ ಮಟ್ಟಕ್ಕೆ ಅವರು ಇಳಿದಿದ್ದಾರೆ. ಗೂಂಡಾಗಳಿಗೆ ಅವರದ್ದೇ ಶೈಲಿಯಲ್ಲಿ ಉತ್ತರ ನೀಡಲಾಗುವುದು ಎಂದಿದ್ದಾರೆ.
ಯಾರೂ ಕಾನೂನನ್ನು ಕೈಗೆತ್ತಿಕೊಂಡು ಗೂಂಡಾಗಳಂತೆ ವರ್ತಿಸುತ್ತಾರೋ, ಅಂತಹವರ ಪರ ಕಾಂಗ್ರೆಸ್‌ನವರು ನಿಲ್ಲುತ್ತಿದ್ದಾರೆ. ಅವರ ರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಇವರು ದೇಶದ ಪರವಿದ್ದಾರೆಯೇ, ಇಲ್ಲ ದೇಶವಿರೋಧಿಗಳ ಪರವಿದ್ದಾರೆಯೇ ಎಂದು ಹರಿಹಾಯ್ದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸದ ವಿಚಾರವಾಗಿ ಮೊಸರಲ್ಲಿ ಕಲ್ಲು ಹುಡುಕುವುದು ಬೇಡ ಎಂದರು. ಒಂದು ವೇಳೆ ನನಗೆ ಗೃಹ ಸಚಿವ ಸ್ಥಾನ ನೀಡಿದರೆ, ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ನಾನು 25 ವರ್ಷ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ್ದೇನೆ. ಹಾಗಾಗಿ ಗೃಹ ಇಲಾಖೆಯನ್ನು ನಿಭಾಯಿಸುವುದು ಹೇಗೆ ಎಂಬುದು ನನಗೆ ಗೊತ್ತಿದೆ. ಆದರೆ ಈ ಖಾತೆಯನ್ನು ಪಡೆಯುವ ಬಗ್ಗೆ ಚಿಂತನೆ ಮಾಡಿಲ್ಲ, ಆದರೆ ಮುಖ್ಯಮಂತ್ರಿಗಳು ನನಗೆ ಗೃಹ ಖಾತೆ ನೀಡುವುದು ಬಿಡುವುದು ಅವರಿಗೆ ಸೇರಿದ್ದು ಎಂದು ನುಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ರೈತರ ಜೀವನ ಹಾಳಾಗುತ್ತಿದೆ ಎಂದು ವಿಪಕ್ಷ ನಾಯಕರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಚಿವರು, ರೈತರಿಗೆ ತೊಂದರೆಯಾಗಬಾರದು ಎಂದು ಕೇಂದ್ರ ಸರ್ಕಾರ 6 ಸಾವಿರ, ರಾಜ್ಯ ಸರ್ಕಾರ 4 ಸಾವಿರ ಸೇರಿ ಒಟ್ಟು 10 ಸಾವಿರ ರೂ ಗಳನ್ನು ನೇರವಾಗಿ ರೈತರ ಖಾತೆಗೆ ಹಾಕಲಾಗುತ್ತಿದೆ.
ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಇಂತಹ ಕೆಲಸ ಮಾಡಿದ್ದಾರಾ?, ಅವರಿಗೆ ಟೀಕೆ ಮಾಡುವುದೇ ಕೆಲಸವಾಗಿದೆ ಎಂದು ಹರಿಹಾಯ್ದರು.ಮಳೆಗಾಲ ಪ್ರಾರಂಭವಾಗಿರುವ ಹಿನ್ನಲೆಯಲ್ಲಿ ರೈತರಿಗೆ ಬಿತ್ತನೆ ಬೀಜದ ಕೊರತೆಯಾಗದಂತೆ ಕೃಷಿ ಇಲಾಖೆ ಕೆಲಸ ಮಾಡುತ್ತಿದೆ. ರಸಗೊಬ್ಬರ ನಕಲಿ ಮಾರಾಟ ಮಾಡುವವರ ವಿರುದ್ಧವೂ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!