ಹೊಸದಿಗಂತ ವರದಿ ಬೆಳಗಾವಿ:
ಗಣೇಶೋತ್ಸವ ಸಂದರ್ಭದಲ್ಲಿ ಡಿಜೆ ಬಳಕೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ. ಗಣೇಶೋತ್ಸವ ಮಂಡಳಿಗಳು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಶಾಂತಿ, ಸೌಹಾರ್ದ ಹಾಗೂ ಭಕ್ತಿಭಾವದಿಂದ ಹಬ್ಬವನ್ನು ಆಚರಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಸೂಚಿಸಿದರು.
ಗುರುವಾರ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ನಡೆದ ಗಣೇಶೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ವರ್ಷವೂ ಗಣೇಶೋತ್ಸವ ಸಂದರ್ಭದಲ್ಲಿ ಡಿಜೆ ಬಳಕೆಗೆ ಪೊಲೀಸ್ ಇಲಾಖೆ ಅನುಮತಿ ನೀಡಿರಲಿಲ್ಲ. ಇಲಾಖೆಯ ಈ ನಿರ್ಧಾರವನ್ನು ಹಿರಿಯ ನಾಗರಿಕರು ಸೇರಿದಂತೆ ಸಾರ್ವಜನಿಕರು ಶ್ಲಾಘಿಸಿದ್ದರು. ಈ ಬಾರಿಯೂ ಸಾರ್ವಜನಿಕರ ಸುರಕ್ಷತೆ, ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಡಿಜೆ ಬಳಕೆಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
12 ಅಡಿ ಎತ್ತರಕ್ಕೆ ಮಿತಿ:
ಬೆಳಗಾವಿ ನಗರದಲ್ಲಿ ಸಾರ್ವಜನಿಕವಾಗಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳಿಗೆ ಗರಿಷ್ಠ 12 ಅಡಿ ಎತ್ತರದ ಮಿತಿ ನಿಗದಿಪಡಿಸಲಾಗಿದೆ. ಗಣೇಶ ಮಂಡಳಿಗಳು ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಪೆಂಡಾಲ್ಗಳ ವಿನ್ಯಾಸವನ್ನೂ ಅತಿಯಾಗಿ ವಿಸ್ತರಿಸದೆ, ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ವ್ಯವಸ್ಥೆ ಮಾಡಬೇಕು ಎಂದು ಆಯುಕ್ತರು ತಿಳಿಸಿದರು. ದೊಡ್ಡ ಗಾತ್ರದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಸ್ಥಳಗಳಿಗೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಮೂರ್ತಿಗಳಿಗೆ ವಿಸರ್ಜನೆ ಸಂದರ್ಭದಲ್ಲಿ ಸುಲಭವಾಗಿ ಎತ್ತಲು ಅನುಕೂಲವಾಗುವಂತೆ ಹುಕ್ಗಳನ್ನು ಅಳವಡಿಸಿರುವುದನ್ನು ಖಚಿತಪಡಿಸಿಕೊಳ್ಳಲಾಗುವುದು. ಗಣೇಶ ಮಂಡಳಿಗಳು ಮೂರ್ತಿಕಾರರಿಗೆ ಮೂರ್ತಿ ನಿರ್ಮಾಣದ ಹಂತದಲ್ಲಿಯೇ ಹುಕ್ ಅಳವಡಿಸುವಂತೆ ಸೂಚಿಸಿದರೆ, ವಿಸರ್ಜನೆ ಪ್ರಕ್ರಿಯೆಯನ್ನು ತ್ವರಿತವಾಗಿ ಹಾಗೂ ಸುರಕ್ಷಿತವಾಗಿ ಪೂರ್ಣಗೊಳಿಸಲು ಅನುಕೂಲವಾಗಲಿದೆ ಎಂದು ಹೇಳಿದರು.
ಸಂಚಾರ ನಿಯಂತ್ರಣಕ್ಕೆ ಸಹಕಾರ ಅಗತ್ಯ:
ಬೆಳಗಾವಿ ನಗರದಲ್ಲಿ ಸುಮಾರು 14 ಲಕ್ಷ ಜನಸಂಖ್ಯೆ ಇದೆ. ಗಣೇಶೋತ್ಸವ ನಡೆಯಲಿ ಅಥವಾ ನಡೆಯದಿರಲಿ, ನಗರದಲ್ಲಿ ನಿರಂತರವಾಗಿ ಪೊಲೀಸ್ ಬಂದೋಬಸ್ತ್ ಮಾಡಬೇಕಾಗುತ್ತದೆ. ಗಣೇಶೋತ್ಸವದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವುದರಿಂದ ಸಂಚಾರ ದಟ್ಟಣೆ ನಿಯಂತ್ರಿಸುವುದು ಸವಾಲಿನ ಕೆಲಸವಾಗಿದೆ. ಹೀಗಾಗಿ ಗಣೇಶೋತ್ಸವ ಮಂಡಳಿಗಳು ಪೊಲೀಸ್ ಇಲಾಖೆಯೊಂದಿಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಭೂಷಣ್ ಬೊರಸೆ ಮನವಿ ಮಾಡಿದರು. ಮೆರವಣಿಗೆ, ಪೆಂಡಾಲ್ಗಳ ನಿರ್ಮಾಣ ಹಾಗೂ ವಿಸರ್ಜನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಪೊಲೀಸ್ ಇಲಾಖೆಯ ಸೂಚನೆಗಳನ್ನು ಪಾಲಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾರ್ಯಕ್ರಮಗಳನ್ನು ರೂಪಿಸುವುದು ಪ್ರತಿಯೊಂದು ಗಣೇಶ ಮಂಡಳಿಯ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.
ಪೆಂಡಾಲ್ಗಳಲ್ಲಿ ಸಿಸಿ ಕ್ಯಾಮೆರಾ ಕಡ್ಡಾಯ:
ಗಣೇಶೋತ್ಸವದ ಸಂದರ್ಭದಲ್ಲಿ ನಗರದ ಪ್ರತಿಯೊಂದು ಗಣೇಶ ಮಂಡಳಿಯೊಂದಿಗೆ ಪೊಲೀಸ್ ಇಲಾಖೆಯ ವತಿಯಿಂದ ಒಬ್ಬ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಇದರಿಂದ ಸ್ಥಳೀಯವಾಗಿ ಉಂಟಾಗಬಹುದಾದ ಸಮಸ್ಯೆಗಳನ್ನು ತಕ್ಷಣವೇ ಪೊಲೀಸರ ಗಮನಕ್ಕೆ ತರಲು ಸಾಧ್ಯವಾಗಲಿದೆ.
ಇದಲ್ಲದೆ, ಗಣೇಶೋತ್ಸವ ಪೆಂಡಾಲ್ಗಳಲ್ಲಿ ಸಿಸಿ ಕ್ಯಾಮೆರಾಗಳ ಅಳವಡಿಕೆ ಕಡ್ಡಾಯ ಮಾಡಲಾಗಿದೆ. ಗಣೇಶೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಆಗಮಿಸುವ ಹಿನ್ನೆಲೆಯಲ್ಲಿ ಸರಗಳ್ಳತನ, ಜೇಬುಗಳ್ಳತನ ಸೇರಿದಂತೆ ಕಳ್ಳತನದಂತಹ ಘಟನೆಗಳನ್ನು ತಡೆಗಟ್ಟಲು ಸಿಸಿ ಕ್ಯಾಮೆರಾಗಳು ಸಹಕಾರಿಯಾಗಲಿವೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಆಯುಕ್ತರು ಸೂಚಿಸಿದರು.
ರಾತ್ರಿ 10ರ ಬಳಿಕ ಧ್ವನಿವರ್ಧಕಕ್ಕೆ ಅವಕಾಶವಿಲ್ಲ:
ಗಣೇಶೋತ್ಸವದ ಸಂದರ್ಭದಲ್ಲಿ ಅಶ್ಲೀಲ ಹಾಡುಗಳು ಅಥವಾ ಸಮಾಜದ ಶಾಂತಿ ಹಾಗೂ ಸೌಹಾರ್ದಕ್ಕೆ ಧಕ್ಕೆ ತರುವಂತಹ ಹಾಡುಗಳನ್ನು ಪ್ರಸಾರ ಮಾಡಬಾರದು. ಧ್ವನಿವರ್ಧಕ ಹಾಗೂ ಸೌಂಡ್ ವ್ಯವಸ್ಥೆಯ ಬಳಕೆಯಲ್ಲಿಯೂ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ರಾತ್ರಿ 10 ಗಂಟೆಯ ನಂತರ ಯಾವುದೇ ರೀತಿಯ ಧ್ವನಿವರ್ಧಕ ಅಥವಾ ಸೌಂಡ್ ವ್ಯವಸ್ಥೆ ಬಳಸಲು ಅವಕಾಶವಿಲ್ಲ ಎಂದು ಭೂಷಣ್ ಬೊರಸೆ ಸ್ಪಷ್ಟಪಡಿಸಿದರು. ಗಣೇಶೋತ್ಸವವು ಎಲ್ಲ ಸಮುದಾಯಗಳ ಜನರು ಸೌಹಾರ್ದಯುತವಾಗಿ ಪಾಲ್ಗೊಳ್ಳುವ ಹಬ್ಬವಾಗಬೇಕು. ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ, ಕಾನೂನು ಸುವ್ಯವಸ್ಥೆ ಕಾಪಾಡಲು ಪ್ರತಿಯೊಬ್ಬರೂ ಪೊಲೀಸರೊಂದಿಗೆ ಕೈಜೋಡಿಸಬೇಕು. ಗಣೇಶ ಮಂಡಳಿಗಳು ನಿಯಮಗಳನ್ನು ಪಾಲಿಸುವ ಮೂಲಕ ಶಾಂತಿಯುತ ಹಾಗೂ ಸೌಹಾರ್ದಯುತ ಗಣೇಶೋತ್ಸವಕ್ಕೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.



