ಹೊಸದಿಗಂತ ವರದಿ ದಾವಣಗೆರೆ
ಗುಟ್ಕಾ ನಿಷೇಧ ಹಾಗೂ ಭದ್ರಾ ಮೇಲ್ದಂಡೆ ಟ್ರಯಲ್ ರನ್ ಗೆ ಭದ್ರಾ ಜಲಾಶಯದಿಂದ ನೀರು ಬಿಡುಗಡೆ ವಿರೋಧಿಸಿ ಸೆ.1ರಂದು ಮಂಗಳವಾರ ದಾವಣಗೆರೆ ನಗರ ಬಂದ್ ಗೆ ಕರೆ ನೀಡಲಾಗಿದೆ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.
ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ-ಕಾಲೇಜುಗಳು, ಆಟೋ ಹಾಗೂ ಬಸ್ ಮಾಲೀಕರು, ವರ್ತಕರು, ರೈತರು, ಸಾರ್ವಜನಿಕರು ಬಂದ್ ಗೆ ಸಹಕರಿಸಬೇಕು. ರೈತಪರ ಹೋರಾಟವನ್ನು ಜಿಲ್ಲಾ ಕೇಂದ್ರದ ಸಮಸ್ತರೂ ಯಶಸ್ವಿಗೊಳಿಸಬೇಕು. ಪಕ್ಷಾತೀತವಾಗಿ ಎಲ್ಲರೂ ಸೇರಿ ಹೋರಾಟ ಮಾಡೋಣ. ಬಂದ್ ಹಿನ್ನೆಲೆಯಲ್ಲಿ ಆ.31ರಂದು ದಾವಣಗೆರೆ ಹಳೆ ಪ್ರವಾಸಿ ಮಂದಿರದಿಂದ ಬೈಕ್ ರ್‍ಯಾಲಿ ಕೈಗೊಂಡು, ಜನತೆಯ ಸಹಕಾರಕ್ಕೆ ಮನವಿ ಮಾಡುತ್ತೇವೆ ಎಂದರು.
ಬರ ಪರಿಸ್ಥಿತಿಯಲ್ಲೂ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಭದ್ರಾ ಡ್ಯಾಂ ನಿಂದ 3 ಟಿಎಂಸಿ ನೀರು ಬಿಡಲು ಆದೇಶಿಸುವ ಮೂಲಕ ಅಚ್ಚುಕಟ್ಟು ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ. ಭದ್ರಾ ಮೇಲ್ದಂಡೆಗೆ ನೀರು ಬಿಡುವ ಬಗ್ಗೆ ಅದರದ್ದೇ ನಿಯಮ, ಷರತ್ತು ಇವೆ. ಅದನ್ನೆಲ್ಲಾ ಗಾಳಿಗೆ ತೂರಿ, ಕಾಂಗ್ರೆಸ್ ಸರ್ಕಾರ ನೀರು ಬಿಡಲು ಆದೇಶಿಸಿರುವುದು ರೈತ ವಿರೋಧಿ ನೀತಿಯಾಗಿದೆ ಎಂದು ಅವರು ದೂರಿದರು.
ಭದ್ರಾ ಅಚ್ಚುಕಟ್ಟು ರೈತರ ಜೊತೆಗೆ ಅಡಿಕೆ ಬೆಳೆಗಾರರಿಗೂ ಆದ ಅನ್ಯಾಯದ ವಿರುದ್ಧದ ಹೋರಾಟವಿದು. ಮೊದಲು ಸಿಗರೇಟ್, ಮದ್ಯ ಮಾರಾಟವನ್ನು ರಾಜ್ಯ ಸರ್ಕಾರ ಬ್ಯಾನ್ ಮಾಡಲಿ. ಸಿಗರೇಟ್, ಮದ್ಯದ ಲಾಬಿಗೆ ಮಣಿದು, ಕಿಕ್ ಬ್ಯಾಕ್ ಪಡೆದ ಸರ್ಕಾರವು ಗುಟ್ಕಾ ಬ್ಯಾನ್ ಗೆ ಮುಂದಾಗಿದೆ. ಡ್ರಗ್ಸ್, ಇಸ್ಪೀಟ್ ಕ್ಲಬ್ ಗಳನ್ನು ಸರ್ಕಾರ ಮೊದಲು ಬಂದ್ ಮಾಡಿಸಲಿ. ಸರ್ಕಾರ ತಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಅವರು ಎಚ್ಚರಿಸಿದರು.
ಮಾಜಿ ಶಾಸಕ ಬಸವರಾಜ ನಾಯ್ಕ, ಮುಖಂಡರಾದ ಚಂದ್ರಶೇಖರ್ ಪೂಜಾರ್, ಬಿ.ಜಿ.ಅಜಯ್ ಕುಮಾರ್, ಬಿ.ಎಂ.ಸತೀಶ, ಚೇತನಾಬಾಯಿ, ರಾಜು ವೀರಣ್ಣ, ಹೆಚ್.ಸಿ.ಜಯಮ್ಮ, ಪ್ರವೀಣ್ ಜಾಧವ್, ಪಂಜು ಪೈಲ್ವಾನ್, ಜಯಲಕ್ಷ್ಮೀ ಮಹೇಶ್, ದೇವೀರಮ್ಮ, ಕೆ.ಎನ್.ವೆಂಕಟೇಶ ಸುದ್ದಿಗೋಷ್ಠಿಯಲ್ಲಿದ್ದರು.



